ಶಿಮ್ಲಾ: ಶಿಮ್ಲಾದ (Shimla) ಸಂಜೌಲಿ ಪ್ರದೇಶದಲ್ಲಿ ಮಸೀದಿಯ (Mosque) ಅನಧಿಕೃತ ಮಹಡಿಗಳನ್ನು ಪುರಸಭೆಯ ಆಯುಕ್ತರ ಆದೇಶದ ಮೇಲೆ ನೆಲಸಮ ಮಾಡುವ ಕಾರ್ಯ ಆರಂಭವಾಗಿದೆ. ತೆರವು ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
5 ಮಹಡಿಯ ಮಸೀದಿ ಕಟ್ಟಡದಲ್ಲಿ 3 ಮಹಡಿ ಅಕ್ರಮ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಅಕ್ಟೋಬರ್ 16 ರಂದು ಮಸೀದಿಯ ಅಕ್ರಮ ಮಹಡಿಗಳನ್ನು ಕೆಡವಲು ಆದೇಶಿಸಲಾಗಿತ್ತು. ಆದೇಶದದ ಅನ್ವಯ ಇಂದು (ಸೋಮವಾರ) ಕಟ್ಟಡದ ಅನಧಿಕೃತ ಮಹಡಿಗಳನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ.
ಸಂಜೌಲಿ ಮಸೀದಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಲತೀಫ್, ವಕ್ಫ್ ಬೋರ್ಡ್ ಕಟ್ಟಡ ಕೆಡವಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿರುವುದನ್ನು ಖಚಿತಪಡಿಸಿದ್ದಾರೆ. ಬೇರೆ ಆರ್ಥಿಕ ಮೂಲಗಳ ಸಹಾಯವಿಲ್ಲದೆ ಸಮಿತಿಯೇ ಕಟ್ಟಡ ತೆರವುಗೊಳಿಸುವ ವೆಚ್ಚವನ್ನು ಭರಿಸುತ್ತಿರುವುದಾಗಿ ಹೇಳಿತ್ತು. ಇದರಿಂದ ಕಾರ್ಯ ಪೂರ್ಣಗೊಳಿಸಲು ಒಂದೆರಡು ತಿಂಗಳು ಬೇಕಾಗಬಹುದು ಎಂದಿದ್ದಾರೆ.
ಸಮಿತಿಯು ತಮ್ಮ ಯೋಜನೆಯ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಶಿಮ್ಲಾ ಮುನ್ಸಿಪಲ್ ಕಾರ್ಪೊರೇಶನ್‌ಗೆ ತಿಳಿಸಿತ್ತು. ಸೆಪ್ಟೆಂಬರ್ 12 ರಂದು ಸಮಿತಿಯ ನಿಯೋಗವು ಅನಧಿಕೃತ ಮಹಡಿಗಳನ್ನು ಸ್ವಯಂಪ್ರೇರಣೆಯಿಂದ ಕೆಡವಲು ಪ್ರಸ್ತಾಪವನ್ನು ಸಲ್ಲಿಸಿತ್ತು ಎಂದು ಅವರು ಹೇಳಿದ್ದಾರೆ.
ಮಸೀದಿ ಇರುವ ಜಾಗದ ಮಾಲೀಕತ್ವವನ್ನು ವಕ್ಫ್ ಬೋರ್ಡ್ ಹೊಂದಿದ್ದರೂ, ಅಕ್ರಮ ಮಹಡಿಗಳ ನಿರ್ಮಾಣಕ್ಕೆ ಸ್ಥಳೀಯರು ವಿರೋಧಿಸಿದ್ದರು. ಈ ಭೂಮಿ ರಾಜ್ಯ ಕಂದಾಯ ಇಲಾಖೆಗೆ ಸೇರಿದ್ದು ಮತ್ತು ಮಸೀದಿಯ ವಿಸ್ತರಣೆಯಿಂದ ತಮಗೆ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ಕಳೆದ ತಿಂಗಳು, ಶಿಮ್ಲಾದಲ್ಲಿ ಹಿಂದೂ ಸಂಘಟನೆಗಳು ದೊಡ್ಡ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ವೇಳೆ ಮಸೀದಿಯನ್ನು ಕೆಡವಲು ಒತ್ತಾಯಿಸಿದ್ದರು.