ಬೆಂಗಳೂರು: ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿ, ಈ ರೀತಿಯ ಘಟನೆ ಮರುಕಳಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಪತ್ರದಲ್ಲಿ ಏನಿದೆ?
ಗೌರವಾನ್ವಿತ ಸುಪ್ರೀಂಕೋರ್ಟ್ 2009ರ ಸೆಪ್ಟೆಂಬರ್ 29ರಂದು ಹೊರಡಿಸಿರುವ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ, ಸ್ಥಳಾಂತರಿಸುವ, ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವಹಿಂದು ಪರಿಷತ್ ಗೌರವಿಸುತ್ತದೆ. ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕ ಪ್ರತ್ಯೇಕವಾಗಿ ವಿಮರ್ಶೆ ಮಾಡಿ(Case by Case Review) ಸಕ್ರಮ, ಸ್ಥಳಾಂತರ, ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರುಗಿಸಬೇಕೆಂದಿದ್ದರೂ ಸಹ ಮೈಸೂರಿನ ಜಿಲ್ಲಾಡಳಿತವು ಮೇಲ್ಕಡ ಯಾವುದೇ ಕ್ರಮ ತೆಗೆದುಕೊಳ್ಳದೆ ಹಿಂದು ದೇವಸ್ಥಾನವನ್ನು ಮಾತ್ರ ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ
ಕೇವಲ ಹಿಂದೂ ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತೊಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿರುವುದನ್ನು ವಿಶ್ವಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಇದರಿಂದ ಇಡೀ ಹಿಂದು ಸಮಾಜದ ಭಾವನೆಗೆ ಅತೀವ ನೋವುಂಟಾಗಿರುತ್ತದೆ. ಕಳೆದ ಎರಡು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಇದೇ ರೀತಿಯಾಗಿ ಹಲವಾರು ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿದ್ದು, ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಅರಸು ರಸ್ತೆಯಲ್ಲಿರುವ ಘೋರಿಯು ನಿಜವಾಗಿಯೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಿದ್ದರೂ ಸಹ ಜಿಲ್ಲಾಡಳಿತವು ಅದನ್ನು ಭಾಗಶಃ ತೆರವು ಗೊಳಿಸಿ, ಮತ್ತೆ ಈಗ ಎರಡು ವರ್ಷಗಳ ನಂತರ ಅರ್ಧಕ್ಕೆ ನಿಲ್ಲಿಸಿದ್ದ ಆ ಕೆಲಸವನ್ನು ಪೂರ್ಣಗೊಳಿಸದೆ ಕೈಬಿಟ್ಟು ಕೇವಲ ಹಿಂದೂ ದೇವಾಲಯಗಳನ್ನು ತೆರವು ಗೊಳಿಸುವ ಮೂಲಕ ತಾರತಮ್ಯ ತೋರಿದ ಜಿಲ್ಲಾಡಳಿತದ ಕ್ರಮವು ಕೋಮು ಸೌಹಾರ್ದತೆಯನ್ನು ಕದಡುವ, ಕೋಮು ವಾದವನ್ನು ಸೃಷ್ಟಿಮಾಡಿರುತ್ತದೆ. ಇದನ್ನೂ ಓದಿ: ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್
ಜಿಲ್ಲಾಡಳಿತದ ಈ ದ್ವಂದ್ವ ನೀತಿಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ, ಜಿಲ್ಲಾಡಳಿತ ಸುಪ್ರೀಂಕೋರ್ಟ್‍ನ ಆದೇಶವನ್ನು ಸರಿಯಾಗಿ ಗ್ರಹಿಸದೆ ರಾತ್ರೋರಾತ್ರಿ ಹಲವಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳನ್ನು ಕೆಡವಿ ಹಿಂದು ಸಮಾಜಕ್ಕೆ ನೋವುಂಟುಮಾಡಿದೆ. ಮಾನ್ಯ ಸುಪ್ರೀಂ ಕೋರ್ಟ್ ಪ್ರತಿಯೊಂದು ಪ್ರಕರಣದಲ್ಲಿಯೂ ಪ್ರತ್ಯೇಕವಾಗಿ ಜಿಲ್ಲಾ ಸಮಿತಿ ದೇವಸ್ಥಾನದ ಮಂಡಳಿ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆ ದೇವಸ್ಥಾನದ ಇತಿಹಾಸ, ದೇವಸ್ಥಾನ ಇರುವ ಸ್ಥಳದಲ್ಲಿ ಇತ್ತೀಚೆಗೆ ರಸ್ತೆ ನಿರ್ಮಾಣವಾಗಿರುವ ವಿಚಾರ ಪರಿಶೀಲಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರೂ ಸಹ ಜಿಲ್ಲಾಡಳಿತ ಅವೈಜ್ಞಾನಿಕವಾಗಿ ದೇವಸ್ಥಾನಗಳನ್ನು ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ: ಎಸ್‍ಡಿಪಿಐ
ವಿಶ್ವ ಹಿಂದೂ ಪರಿಷತ್ ಈ ಮೂಲಕ ಎಚ್ಚರಿಕೆ ಹಾಗೂ ಆಗ್ರಹ ಪಡಿಸುವುದೇನೆಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ಉರ್ಜಿತಗೊಳಿಸಲು ಮತ್ತು ಸ್ಥಾಳಾಂತರಿಸಲು ಬೇಕಾಂದತಹ ಕ್ರಮ ಜರುಗಿಸಿ ದೇವಸ್ಥಾನಗಳನ್ನು ಉಳಿಸಿ ರಕ್ಷಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.