ಎಲ್ಲಾ ದೇವಾಲಯ, ಮಸೀದಿ, ಚರ್ಚ್ ಒಡೆದು ಹಾಕಿ ಎಂದು ಕೆ.ಎಸ್ ಭಗವಾನ್ ವಿವಾದ ಸೃಷ್ಟಿ

Public TV
1 Min Read
BHAGWAN

– ಭಗವಾನ್ ಹೇಳಿಕೆಗೆ ನಟ ಮಾಸ್ಟರ್ ಕಿಶನ್ ವಿರೋಧ

ರಾಯಚೂರು: ದೇಶದ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳನ್ನು ಒಡೆದು ಹಾಕಿ. ಇವು ಜನರನ್ನು ಸೇರಿಸಲ್ಲ ದೂರ ಮಾಡುತ್ತವೆ. ಎಲ್ಲಾ ಮತಗಳು ದ್ವೇಷವನ್ನು ಹರಡುತ್ತಿವೆ ಎಂದು ಚಿಂತಕರಾದ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು ರಾಯಚೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅನಗತ್ಯ. ಮಂದಿರ ಬದಲಾಗಿ ಉತ್ತಮ ಜಲಾಶಯ, ಅತ್ಯುತ್ತಮ ವಿಶ್ವವಿದ್ಯಾಲಯ, ಗ್ರಾಮಗಳಲ್ಲಿ ಉತ್ತಮ ಶಾಲೆ ನಿರ್ಮಾಣವಾಗಬೇಕು. 26 ಬಾರಿ ಹೊರಗಿನವರು ದೇಶದ ಮೇಲೆ ದಾಳಿ ಮಾಡಿದಾಗ ದೇವರು ಎಲ್ಲಿ ಹೋಗಿದ್ದರು? ನಿಮ್ಮ ರಾಮ, ಶಿವ, ಕೃಷ್ಣ, ಕಾಳಿ ಏನ್ ಮಾಡುತ್ತಿದ್ದರು? ಕೆಲಸಕ್ಕೆ ಬಾರದ ದೇವರುಗಳಿಗೆ ದೇವಾಲಯ ಯಾಕೆ ಕಟ್ಟಬೇಕು? ಯಾವ ದೇವಸ್ಥಾನ ಕಟ್ಟುವುದು ಪ್ರಯೋಜನವಿಲ್ಲ ಎಂದು ಹೇಳಿದರು.

ಶಿವನ ದೇವಾಲಯ ಯಾಕೆ ಕಟ್ಟುವುದಿಲ್ಲ? ಶಿವ ಪುರಾತನ ದೇವರು. ಗುಲಾಮಗಿರಿ ಎತ್ತಿಹಿಡಿಯುವ ದೇವರಲ್ಲ. ಆದ್ರೆ ಗುಲಾಮಗಿರಿಯನ್ನು ಎತ್ತಿ ಹಿಡಿಯುವ ರಾಮ, ಕೃಷ್ಣರ ದೇವಾಲಯಗಳನ್ನೇ ಯಾಕೆ ಕಟ್ಟುತ್ತಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರು ಅಂತ ಹೇಳಿಲ್ಲ ಎಂದು ಭಗವಾನ್ ಹೇಳಿದ್ರು.

ಇದೇ ವೇದಿಕೆಯಲ್ಲಿದ್ದ ಮಾಸ್ಟರ್ ಕಿಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಭಗವಾನ್ ಅವರ ಮಾತನ್ನ ನಾನು ಒಪ್ಪಲ್ಲ. ಮಂತ್ರಾಲಯಕ್ಕೆ ಹೋಗಬೇಕು ಅಂತ ಆಸೆ ಇತ್ತು. ಇವತ್ತು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದೆ. ಉಪವಾಸ ವ್ರತ ಆಚರಿಸಿ ನಾನು ದೇವಸ್ಥಾನಕ್ಕೆ ಹೋಗಿ ಬಂದೆ. ಒಬ್ಬ ಯುವಕನಾಗಿ ಜಾತಿ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ. ಶಾಂತಿಗಾಗಿ ದೇವಾಲಯಕ್ಕೆ ಹೋಗುತ್ತೇವೆ ಎಂದು ಹೇಳಿದ್ರು.

 

Share This Article
Leave a Comment

Leave a Reply

Your email address will not be published. Required fields are marked *