– ರಾಜೀನಾಮೆ ನಿರ್ಧಾರ ಕೈಬಿಡಿ ರಾಹುಲ್ ಗಾಂಧಿಗೆ ಒತ್ತಾಯ
ನವದೆಹಲಿ: ರಾಜೀನಾಮೆ ನಿರ್ಧಾರ ಕೈಬಿಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಕಾಂಗ್ರೆಸ್ ಕಚೇರಿಯ ಎದುರಿಗೆ ಇದ್ದ ಮರಕ್ಕೆ ಕಾಂಗ್ರೆಸ್ ಕಾರ್ಯಕರ್ತ ನೇಣು ಹಾಕಿಕೊಳ್ಳಲು ಮುಂದಾಗಿದ್ದ. ಇದನ್ನು ನೋಡಿದ ಪೊಲೀಸರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಾರ್ಯಕರ್ತ ಮರವನ್ನು ಹಿಡಿದು ಜೋತು ಬಿದ್ದಿದ್ದ. ಹೀಗಾಗಿ ಸ್ಥಳೀಯರ ಸಹಾಯದಿಂದ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.
Delhi: A Congress worker attempted suicide by trying to hang himself outside Congress Office. He says, "Rahul Gandhi should take back his resignation else I will hang myself." pic.twitter.com/AhoClvzEPk
— ANI (@ANI) July 2, 2019
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ರಾಜೀನಾಮೆ ವಿರೋಧಿಸಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನದ ಸಹ-ಉಸ್ತುವಾರಿ ತರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಪಕ್ಷವು ನನಗೆ 2017ರಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ, ಸರ್ಕಾರ ರಚನೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ವೇಳೆಯೂ ಉತ್ತಮ ರೀತಿಯಲ್ಲಿ ಪ್ರಚಾರ ಹಾಗೂ ಪಕ್ಷ ಸಂಘಟನೆ ಮಾಡಿದ್ದೇವು. ಆದರೆ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಪಕ್ಷದ ಸೋಲನ್ನು ಸಂಪೂರ್ಣವಾಗಿ ನೀವು ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವಿರಿ. ಈ ಸೋಲಿಗೆ ನಾವು ಕೂಡ ಜವಾಬ್ದಾರರಾಗಿದ್ದೇವೆ. ಹೀಗಾಗಿ ನಿಮಗೆ ರಾಜೀನಾಮೆ ಪತ್ರ ನೀಡುತ್ತಿರುವೆ ಎಂದು ತರುಣ್ ಕುಮಾರ್, ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದರು.
ರಾಹುಲ್ ಗಾಂಧಿ ಅವರೇ ಪಕ್ಷವನ್ನು ಮುನ್ನಡೆಸಬೇಕು ಎಂದು ಅನೇಕ ಯುವಕರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‍ನ ಹಿರಿಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಕಾಂಗ್ರೆಸ್‍ನ ಮಧ್ಯಪ್ರದೇಶ ಘಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಮತ್ತು ಗೋವಾ ಕಾಂಗ್ರೆಸ್ ಘಟಕ ಅಧ್ಯಕ್ಷ ಗಿರೀಶ್ ಚೊಡನ್‍ಕರ್ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಎಐಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ 300ಕ್ಕೂ ಹೆಚ್ಚು ಯುವ ನಾಯಕರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.