ರಾಯಚೂರು: ನಾಲ್ವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಂತರರಾಜ್ಯ ಅಪಹರಣಕಾರರನ್ನು ಜಿಲ್ಲೆಯ ಸಿಂಧನೂರಿನ (Sindhanuru) ಕುನ್ನಟಗಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಿಡ್ನಾಪ್ (Kidnap) ಆಗಿದ್ದ ನಾಲ್ವರು ಯುವಕರನ್ನು ಮೂಲತಃ ಮಹಾರಾಷ್ಟ್ರದ (Maharashtra) ಪುಣೆ (Pune) ನಿವಾಸಿಗಳಾದ ಸ್ಟಪನ್ ಭಜರಂಗ ಲಾಂಡೆ, ಶುಭಂ ಭಜರಂಗ ಲಾಂಡೆ, ಕೃಷ್ಣ ಗಜಾನನ ಪಾಂಡ್ರೆ ಹಾಗೂ ಓಂಕಾರ ಗಜಾನನ ಪಾಂಡ್ರೆ ಎಂದು ಗುರುತಿಸಲಾಗಿದೆ. ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್ ಬಂಧಿತ ಅಪಹರಣಕಾರರು.ಇದನ್ನೂ ಓದಿ: ದೆಹಲಿ ಪೊಲೀಸರ ಭರ್ಜರಿ ಬೇಟೆ – 2,000 ಕೋಟಿ ಮೌಲ್ಯದ ಕೊಕೇನ್ ವಶ
ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರನ್ನು ಅಪಹರಿಸಿ, ಜಿಲ್ಲೆಯ ಸಿಂಧನೂರಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಕೂಡಿಡಲಾಗಿತ್ತು. ಅಪಹರಣದ ಮುಖ್ಯ ಆರೋಪಿ ರಾಮು ತನ್ನ ಪತ್ನಿಯ ಸಂಬಂಧಿಕನ ಸಹಾಯದಿಂದ ಅವರನ್ನು ಕುನ್ನಟಗಿ ಗ್ರಾಮದ ಮನೆಯಲ್ಲಿ ಬಂಧಿಸಿದ್ದರು. ಬಳಿಕ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಹಾಗೂ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮೊಬೈಲ್ ನೆಟ್‌ವರ್ಕ್ ಆಧರಿಸಿ ಕುನ್ನಟಗಿ ಗ್ರಾಮಕ್ಕೆ ಬಂದಿಳಿದಿದ್ದಾರೆ. ಗ್ರಾಮಕ್ಕೆ ಬಂದ ಪೊಲೀಸರನ್ನು ಕಂಡ ಅಪಹರಣಕಾರರು ಗನ್ ತೋರಿಸಿ ಬೆದರಿಕೆ ಹಾಕಿದ್ದರು. ಚಾಣಾಕ್ಷತನದಿಂದ ಮನೆಯೊಳಗೆ ನುಗ್ಗಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಜೊತೆಗೆ ಅಪಹರಣಕ್ಕೊಳಗಾಗಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಗನ್, ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸದ್ಯ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ‘ಪ್ರಾಪ್ತಿ’ ಸಿನಿಮಾ: ವರ್ತಮಾನಕ್ಕೆ ಹಿಡಿದ ಕನ್ನಡಿ