ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly elections) ಸೀಟು ಹಂಚಿಕೆ ವಿಚಾರದಲ್ಲಿ ಮಹಾ ವಿಕಾಸ್ ಅಘಾಡಿ (Maha Vikas Aghadi) ಹೆಣಗಾಡುತ್ತಿದೆ. ಇದರ ನಡುವೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು ಹಲವು ಕಾಂಗ್ರೆಸ್ (Congress ) ನಾಯಕರು ಸೀಟು ಹಂಚಿಕೆ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ (Mumbai) 36 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಬೇಡಿಕೆ ಇಟ್ಟಿತ್ತು. ಈಗ ಕಾಂಗ್ರೆಸ್ ಕೇವಲ 10 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಇದು ಕೆಲವು ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.
Advertisement
ಮುಂಬೈ ಕಾಂಗ್ರೆಸ್ ಅಧ್ಯಕ್ಷ ವರ್ಷಾ ಗಾಯಕ್‌ವಾಡ್ ಅವರು ಪಕ್ಷದ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ವದಂತಿಯನ್ನು ತಳ್ಳಿಹಾಕಿದ್ದಾರೆ. ವದಂತಿಗಳನ್ನು ಹರಡುವವರು ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಜನರು ಎಂದು ಆರೋಪಿಸಿದ್ದಾರೆ. ಅಲ್ಲದೇ ಅರ್ಹತೆ ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಬೇಸರಗೊಂಡವರು ಅಥವಾ ಟಿಕೆಟ್ ಸಿಗದವರು ಏನು ಬೇಕಾದರೂ ಹೇಳಬಹುದು ಆದರೆ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಈ ಚುನಾವಣೆಯಲ್ಲಿ ಹಾಲಿ ಶಾಸಕ ಅಸ್ಲಾಂ ಶೇಖ್ ಮತ್ತು ಅಮೀನ್ ಪಟೇಲ್ ಅವರು ಮಲಾಡ್ ಪಶ್ಚಿಮ ಮತ್ತು ಮುಂಬಾದೇವಿ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ಆಂತರಿಕ ವಿರೋಧದ ನಡುವೆಯೂ ಗಾಯಕ್ವಾಡ್ ಸಹೋದರಿ ಜ್ಯೋತಿ ಧಾರಾವಿ ಟಿಕೆಟ್ ಪಡೆದುಕೊಂಡಿದ್ದು, ಮಾಜಿ ಸಚಿವ ನಸೀಮ್ ಖಾನ್ ಚಾಂಡಿವಿಲಿಯಿಂದ ಸ್ಪರ್ಧಿಸಲಿದ್ದಾರೆ.
Advertisement
ಇಲ್ಲಿಯವರೆಗೂ ಮಹಾರಾಷ್ಟ್ರದಲ್ಲಿ ಎಂವಿಎ 255 ಸ್ಥಾನಗಳಿಗೆ ಸೀಟು ಹಂಚಿಕೆಯನ್ನು ಮಾಡಿದೆ. ಮೈತ್ರಿಯ ಪ್ರತಿ ಪಕ್ಷವೂ 85 ಸ್ಥಾನಗಳನ್ನು ಪಡೆಯಲಿವೆ. ಕಾಂಗ್ರೆಸ್ ಇದುವರೆಗೂ 71 ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷವು ವಿದರ್ಭದಿಂದ ಗರಿಷ್ಠ 30 ಅಭ್ಯರ್ಥಿಗಳನ್ನು ಹೆಸರಿಸಿದೆ. ಪಕ್ಷವು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್) ಮತ್ತು ಕೊಂಕಣದಿಂದ 14 ಅಭ್ಯರ್ಥಿಗಳನ್ನು, ಪಶ್ಚಿಮ ಮಹಾರಾಷ್ಟ್ರದಿಂದ 13, ಮರಾಠವಾಡದಿಂದ 10 ಮತ್ತು ಉತ್ತರ ಮಹಾರಾಷ್ಟ್ರದಿಂದ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉದ್ಧವ್ ಠಾಕ್ರೆ ಅವರ ಶಿವ ಸೇನೆಯು 83 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.