ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

Public TV
2 Min Read
Gurpatwant Singh Pannun

ನವದೆಹಲಿ: ಭಾರತ ಸರ್ಕಾರ ನಿಷೇಧಿಸಿದ ಖಲಿಸ್ತಾನಿ ಪರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ರಾಹುಲ್‌ ಗಾಂಧಿ (Rahul Gandhi) ಹೇಳಿಕೆಯನ್ನು ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ್‌ ರಾಷ್ಟ್ರ (Khalistan Nation) ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾನೆ.

ವಾಷಿಂಗ್ಟನ್‌ನಲ್ಲಿರುವ ಗುರುಪತ್‌ವಂತ್ ಸಿಂಗ್ ಪನ್ನುನ್ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ಹೇಳಿಕೆಯಲ್ಲಿ ಏನಿದೆ?
ಅನೇಕ ಖಲಿಸ್ತಾನ್ ಪರ ಸಿಖ್ಖರು ಹಾಜರಿದ್ದ ವಾಷಿಂಗ್ಟನ್ ಡಿಸಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು SFJ ಯ ಜಾಗತಿಕ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹ ಅಭಿಯಾನವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಸಿಖ್ಖರಿಗೆ ಪೇಟ, ಕಡವನ್ನು ಧರಿಸಿ ಗುರುದ್ವಾರಕ್ಕೆ ಹೋಗುವುದಕ್ಕೆ ಅನುಮತಿ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.

Rahul Gandhi 1

ಭರತದ ಸಿಖ್ಬರ್‌ ಬಗ್ಗೆ ರಾಹುಲ್‌ ಆಡಿರುವ ಮಾತು ದಿಟ್ಟತನದಿಂದ ಕೂಡಿರುವುದು ಮಾತ್ರವಲ್ಲ 1947 ರಿಂದ ಭಾರತದಲ್ಲಿ ಸಿಖ್ಖರು ಎದುರಿಸುತ್ತಿರುವ ವಾಸ್ತವಿಕ ಇತಿಹಾಸದಲ್ಲಿ ಎದುರಿಸುತ್ತಿರವ ಸಮಸ್ಯೆಯನ್ನು ತಿಳಿಸಿದೆ. ಸಿಖ್ಸ್ ಫಾರ್ ಜಸ್ಟಿಸ್‌ ಸಂಘಟನೆ ಸಿಖ್ಖರ ತಾಯ್ನಾಡಾಗಿ ಖಲಿಸ್ತಾನ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಬೇಕೆಂಬ ಪಂಜಾಬ್ ಸ್ವಾತಂತ್ರ್ಯದ ಜನಾಭಿಪ್ರಾಯ ಸಂಗ್ರಹಣೆಯ ಸಮರ್ಥನೆಯನ್ನು ದೃಢೀಕರಿಸುತ್ತದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

ರಾಹುಲ್‌ ಹೇಳಿದ್ದೇನು?
ಸಿಖ್ಖರು (Sikhs) ಟರ್ಬನ್, ಖಡಗ ಧರಿಸುವುದಕ್ಕೆ ಹೆದರುವಂತಾಗಿದೆ. ಇದು ಒಬ್ಬ ವ್ಯಕ್ತಿ ಮತ್ತು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ಇಂತಹ ಸ್ಥಿತಿ ಇದೆ. ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ, ಸಿಖ್‌ ಸಮುದಾಯದ ಮೇಲೆ ಹತ್ಯಾಕಾಂಡ ನಡೆದ ಸಂದರ್ಭವಿತ್ತು. ಆಗ 3,000 ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು. ಆ ಸಂದರ್ಭದಲ್ಲಿ ನನ್ನ ಕೆಲವು ಸಹೋದರರು ಪೇಟ ಧರಿಸುವುದನ್ನೇ ಬಿಟ್ಟರು ಎಂದು ರಾಹುಲ್‌ ಹೇಳಿದ್ದರು.

ಗುರುಪತ್‌ವಂತ್ ಸಿಂಗ್ ಪುನ್ನುನ್‌ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಹುಲ್‌ ಗಾಂಧಿಯನ್ನು ಟೀಕಿಸಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನಿಜಕ್ಕೂ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರು ಭಾರತದ ಸಾಮಾಜಿಕ ರಚನೆಯನ್ನು ನಾಶಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್‌ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ ಫಾರಿ ಜಸ್ಟಿಸ್‌ನ (ಎಸ್‌ಎಫ್‌ಜೆ) ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೇ ಭಾರತೀಯ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ.

 

Share This Article