ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಬೇಕೆಂದು ಇಲ್ಲಿನ ಜನರು ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ನಮ್ಮ ಊರು ತಾಲೂಕು ಕೇಂದ್ರವಾಗುತ್ತೆ ಎಂದು ಕಂಡಿದ್ದ ಕನಸು ನನಸು ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಕುಶಾಲನಗರವನ್ನು ತಾಲೂಕು ಕೇಂದ್ರ ಎಂದು ಘೋಷಿಸಬೇಕೆಂದು ಪಟ್ಟಣವನ್ನು ಬಂದ್ ಮಾಡಿ ಸ್ಥಳೀಯರು ಆಕ್ರೋಶ ಹೊರಹಾಕಿದರು.
ಇಂದು ಕುಶಾಲನಗರ ಪಟ್ಟಣದಲ್ಲಿ ಯಾವುದೇ ವ್ಯಾಪಾರ ವಹಿವಾಟು ಇರಲಿಲ್ಲ. ವರ್ತಕರು ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಬೆಂಬಲ ಸೂಚಿಸಿದರು. ಬೆಳಗ್ಗೆ 11.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತಡೆದ ಹೋರಾಟಗಾರರು ಕುಶಾಲನಗರವನ್ನ ತಾಲೂಕು ಅಂತಾ ಘೋಷಣೆ ಮಾಡಬೇಕು ಅಂತಾ ಒತ್ತಾಯಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಪಟ್ಟಣದ ಮೈಸೂರು-ಮಂಗಳೂರು ರಾ.ಹೆ 275ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
Advertisement
Advertisement
ಕರುನಾಡ ಜೀವನದಿ ಕಾವೇರಿ ಜಿಲ್ಲೆಯಲ್ಲಿ ಹುಟ್ಟೋದ್ರಿಂದ ಕುಶಾಲನಗರವನ್ನ ಕಾವೇರಿ ಅಂತಾ ಬದಲಾವಣೆ ಮಾಡಬೇಕು. ಅಲ್ಲದೇ ಸದ್ಯ ಇರುವ ಸೋಮವಾರಪೇಟೆ ತಾಲೂಕಿನ ಕೆಲ ಹಳ್ಳಿಗಳಿಂದ ಸುಮಾರು 60-70 ಕೀಲೋ ಮೀಟರ್ ಆಗಲಿದ್ದು, ಕೇಂದ್ರ ಕಚೇರಿಗೆ ಬರಬೇಕು ಅಂದ್ರೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 1993ರಿಂದಲೂ ಜನಸಾಮಾನ್ಯರು ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬೃಹತ್ ಹೋರಾಟವನ್ನ ಮಾಡಿದ್ದರು. ಕೊನೆಪಕ್ಷ ಈ ಬಾರಿಯ ಬಜೆಟ್ ನಲ್ಲಾದ್ರೂ ಘೋಷಣೆ ಆಗುತ್ತೆ ಅಂತಾ ಎಲ್ಲರೂ ಭಾವಿಸಿದ್ರೂ, ಕನಸು ನನಸಾಗಲೇ ಇಲ್ಲ ಎಂದು ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಸಮಾಧಾನ ಹೊರಹಾಕಿದರು.
Advertisement
Advertisement
ನ್ಯಾಯಾಲಯ, ಪೊಲೀಸ್ ಠಾಣೆ, ವಿಶೇಷ ತಹಶೀಲ್ದಾರ್ ಕಚೇರಿ ಸೇರಿದಂತೆ ಕುಶಾಲನಗರ ತಾಲೂಕಿಗೆ ಬೇಕಾದ ಎಲ್ಲಾ ಮಾನದಂಡವನ್ನ ಹೊಂದಿದೆ. ಅಲ್ಲದೇ ಸುಮಾರು 1 ಲಕ್ಷ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನ ಪಟ್ಟಣ ಹೊಂದಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಪ್ರತಿ ಬಾರಿಯೂ ತಾಲೂಕು ಪಟ್ಟ ಕುಶಾಲನಗರದ ಕೈ ತಪ್ಪುತ್ತಲೇ ಬಂದಿದೆ. ಆದರೆ ಈ ಬಾರಿ ಮಾತ್ರ ಹೋರಾಟವನ್ನ ಸವಾಲಾಗಿ ತೆಗೆದುಕೊಂಡಿರುವ ಕುಶಾಲನಗರ ಜನತೆ, ತಾಲೂಕು ಆಗಿ ಘೋಷಣೆ ಮಾಡದ ಹೊರತು, ಹೋರಾಟದಿಂದ ಹಿಂದೆ ಸರಿಯೋದಿಲ್ಲ ಅಂತಾ ಶಪಥ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv