ಕೋಲಾರ: ಕೋಮುಲ್ ಒಕ್ಕೂಟವು ಹಾಲಿನ ಖರೀದಿ ದರ ಪ್ರತಿವರ್ಷ ಪ್ರಾರಂಭದಲ್ಲಿ ಹೆಚ್ಚಳ ಮಾಡಿದಂತೆ ಈ ವರ್ಷವೂ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಎಂದು ತುರಾಂಡಹಳ್ಳಿ ಡೇರಿ ಅಧ್ಯಕ್ಷ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ ವೆಂಕಟೇಶ್ ಒಕ್ಕೂಟವನ್ನು ಒತ್ತಾಯ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಪ್ರತ್ಯೇಕವಾಗಿ ಆಡಳಿತ ಮಂಡಳಿ ಇಲ್ಲದಿದ್ದರೂ ಸಹ ಲೀಟರ್ ಗೆ 1 ರೂ. ಹೆಚ್ಚಿಸಿದೆ ಕೋಮುಲ್ ಆಡಳಿತ ಮಂಡಳಿ ಇದ್ದರೂ ಯಾವುದೇ ರೀತಿಯಲ್ಲಿ ಉತ್ಪಾದಕರಿಗೆ ನೆರವಾಗಿಲ್ಲ ಕೂಡಲೇ ಖರೀದಿ ದರ ಹೆಚ್ಚಳ ಮಾಡಬೇಕು. ಜೊತೆಗೆ ಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 10 ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಕನಿಷ್ಠ 50 ರೂ. ಖರ್ಚು ಬರುತ್ತದೆ. ಹಿಂಡಿ, ಬೂಸಾ ದರಗಳು ಸಹ ಕಳೆದ 1 ತಿಂಗಳಿಂದ 50 ಕೆಜಿ ಚೀಲಕ್ಕೆ 100 ರೂ. ಹೆಚ್ಚಾಗಿದ್ದು ರೈತರು ಸಂಕಷ್ಟದಲ್ಲಿ ಜೀವನ ಮಾಡುತ್ತಿದ್ದಾರೆ. ಕಳೆದ ವರ್ಷ ಬೇಸಿಗೆ ಪ್ರಾರಂಭದಲ್ಲಿ ಒಕ್ಕೂಟ 2 ರೂ. ದರ ಹೆಚ್ಚಿಸಿತ್ತು ಅದರೆ ಸರ್ಕಾರ 4 ರೂ. ನೀಡಿದ ತಕ್ಷಣ 2 ರೂ. ವಾಪಸ್ ಪಡೆಯಲಾಗಿದೆ. ಈಗಲಾದರೂ ರೈತರು ಉತ್ಪಾದಿಸುವ 1 ಲೀಟರ್ ಹಾಲಿಗೆ ಕನಿಷ್ಠ 2 ರೂ. ಹೆಚ್ಚು ಮಾಡಬೇಕು. ಜೊತೆಗೆ ಪಶು ಆಹಾರಕ್ಕೆ ಮೆಕ್ಕೆ ಜೋಳವನ್ನ ನೇರವಾಗಿ ರೈತರಿಂದಲೇ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಕೋಲಾರ ಒಕ್ಕೂಟವು ಎಂ.ವಿ.ಕೆ ಗೋಲ್ಡನ್ ಡೇರಿ ಹೆಸರಿನಲ್ಲಿ ಉತ್ಪಾದಕರಿಂದ ಲೀಟರ್ ಹಾಲಿಗೆ 1 ರೂ. ಕಡಿತ ಮಾಡುತ್ತಿದ್ದು ದಿನಕ್ಕೆ ಕನಿಷ್ಠ 7 ಲಕ್ಷ ಸಂಗ್ರಹವಾಗುತ್ತಿದೆ. ಇನ್ನೂ ಮುಂದೆ ಕಡಿತ ಮಾಡದೇ ನೇರವಾಗಿ ಉತ್ಪಾದಕರಿಗೆ ಕೊಡಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಾಯೋಗಿಕ ಪ್ರಾಕೃತಿಕ ವೈಪರೀತ್ಯಗಳಿಂದ, ಪಶು ಆಹಾರ, ಹಸಿಹುಲ್ಲು, ಚಿಕಿತ್ಸೆ ಔಷಧೋಪಚಾರ, ಕೂಲಿ ಸಂಬಳ, ಸಾಗಾಟ ಇನ್ನಿತರ ವೆಚ್ಚಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಒಕ್ಕೂಟ ಮತ್ತು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.



