ರಾಮನಗರ: ಚಳಿಗಾಲ ವಿಶೇಷ ಅತಿಥಿ ಎಂದೇ ಕರೆಸಿಕೊಳ್ಳುವ ಅವರೆಕಾಯಿಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಅವರೆಕಾಯಿ ರಾಮನಗರಕ್ಕೆ ಬಂದು ಬೀಳ್ತಿದೆ. ವಿಶೇಷವೆಂದರೆ ಹುಣಸೂರಿನ ಅವರೆಕಾರಿ ಈ ಬಾರಿ ಜಿಲ್ಲೆಯ ತಾಲೂಕುಗಳಿಗೆ ಎತ್ತೇಚ್ಚವಾಗಿ ಹರಿದು ಬರುತ್ತಿದೆ.
ತೊಗರಿಕಾಯಿ ನಂತರ ಮಾರುಕಟ್ಟೆ ಪ್ರವೇಶಿಸುವ ಅವರೆಕಾಯಿ ಸಾಮಾನ್ಯವಾಗಿ ನವೆಂಬರ್ ನಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದರಂತೆ ಈ ವರ್ಷವೂ ಯಥೇಚ್ಚ ಪ್ರಮಾಣದಲ್ಲಿ ಅವರೆಕಾಯಿ ಮಾರುಕಟ್ಟೆಗೆ ಬಂದಿದೆ.
Advertisement
Advertisement
ಡಿಸೆಂಬರ್ ಅಂತ್ಯದಿಂದ ಜನವರಿ ಮೊದಲೆರಡು ವಾರ ಅತಿ ಹೆಚ್ಚು ಅವರೆಕಾಯಿ ಫಸಲು ಬರುತ್ತೆ. ಇದೀಗ ಈ ಅವರೆಕಾಯಿ ರಾಮನಗರ ಜಿಲ್ಲೆಯ ಮಾಗಡಿ, ಚನ್ನಪಟ್ಟಣ, ಕನಕಪುರ ಅಷ್ಟೇ ಅಲ್ಲದೆ ಕುಣಿಗಲ್, ನೆಲಮಂಗಲ ಮಾರುಕಟ್ಟೆಯಲ್ಲಿಯೂ ಸಹ ಸೋನೆ ಅವರೆಕಾಯಿಯ ಘಮಲು ಜೋರಾಗಿದ್ದು, ಚಳಿಗಾಲದಲ್ಲಿ ಬಾಯಿಗೆ ರುಚಿ ನೀಡುವ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆಯುಂಟಾಗಿದೆ.
Advertisement
ಪ್ರತಿನಿತ್ಯ ಮಾರುಕಟ್ಟೆಗೆ 2-3 ಟೆಂಪೋ ಅವರೆಕಾಯಿ ರಾಮನಗರ ಜಿಲ್ಲೆಗೆ ಬಂದು ಬೀಳುತ್ತಿದೆ. ಪ್ರತಿ ಲೋಡ್‍ನಲ್ಲಿ ತಲಾ 65-70 ಕಿಲೋ ಅವರೆಕಾಯಿ ತುಂಬಿದ 25-30 ಚೀಲಗಳನ್ನು ತುಂಬಲಾಗುತ್ತಿದೆ. ಹೋಲ್‍ಸೇಲ್ ವ್ಯಾಪಾರಿಗಳು ಹುಣಸೂರಿನಿಂದ ತಂದ ಕಾಯಿಯನ್ನು ಸ್ಥಳೀಯವಾಗಿ ಅಂಗಡಿ ಮಾಲೀಕರು, ಕೈಗಾಡಿ ವ್ಯಾಪಾರಸ್ಥರು ಖರೀದಿಸಿ ಖುಷಿಖುಷಿಯಾಗಿ ಮಾರಾಟ ಮಾಡುತ್ತಿದ್ದಾರೆ.
Advertisement
ಚಳಿಗಾಲದ ಅತಿಥಿಯಾಗಿರುವ ಅವರೆಕಾಯಿಗೆ ಹೋಟೆಲ್, ಮನೆ ಮನೆಗಳಲ್ಲಿಯೂ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಹೋಟೆಲ್‍ಗಳಲ್ಲಿ ಅವರೆಕಾಯಿ ಉಪ್ಪಿಟ್ಟು, ಅವರೆಕಾಯಿ ಪಲ್ಯ, ಅವರೆಕಾಯಿ ಸಾರು, ಮುದ್ದೆ ಊಟಕ್ಕೆ ಗ್ರಾಹಕರು ಮುಗಿಬೀಳ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಅವರೆಕಾಯಿ ಸಾಂಬಾರ್, ಮುದ್ದೆ, ಅವರೆಕಾಯಿ ಸೊಪ್ಪಿನ ಬಸ್ಸಾರು, ಹಿದುಕಿದ ಅವರೆಕಾಯಿ ಸಾಂಬಾರ್ ಈ ರೀತಿಯ ನಾನಾ ತರಹದ ಅಡುಗೆಗಳಲ್ಲಿ ಅವರೆಕಾಯಿ ಬಳಕೆಯಾಗುತ್ತಿದೆ.