ನವೀನ್ ಸಾಗರ್
ಕಾರವಾರ: ಮಾನವನ ಆಹಾರ ಸರಪಳಿಯಲ್ಲಿ ಮಾಂಸಹಾರ, ಸಸ್ಯಹಾರ ಪದ್ಧತಿಗಳಿದ್ದು, ಹಾಗೆಯೇ ಪ್ರಾಣಿ ಪಕ್ಷಿಗಳಿಗೂ ಪರಿಸರವೇ ನಿರ್ಮಿಸಿದ ಆಹಾರ ಸರಪಳಿ ಪರಿಸರವನ್ನು ಸಮತೋಲನದಲ್ಲಿಟ್ಟಿವೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಎಂಬುವುದಕ್ಕೆ ಕಾರವಾರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಪ್ಪೆ ಸಾಗಣಿಕೆಯೇ ಸಾಕ್ಷಿಯಾಗಿದೆ.
ಆಹಾರದ ನೆಪದಲ್ಲಿ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಅವುಗಳ ಸಂತತಿಯ ಅವನತಿಗೆ ನೇರ ಕಾರಣವಾಗಿದ್ದು, ಮಾನವನ ದಾಹಕ್ಕೆ ಅದೆಷ್ಟೋ ಪ್ರಾಣಿ, ಪಕ್ಷಿಗಳು ಅಳಿವಿನಂಚಿಗೆ ತಲುಪಿವೆ. ಈಗ ನಮ್ಮ ದಾಹಕ್ಕೆ ಉಭಯವಾಸಿ ಜೀವಿಯಾದ ಕಪ್ಪೆಗಳು ಕೂಡ ಬಲಿಯಾಗುತ್ತಿದೆ. ಚೀನಾ, ರಷ್ಯಾದಂತ ಹೊರದೇಶಗಳಲ್ಲಿ ಕಪ್ಪೆ ಭಕ್ಷಣೆ ಸರ್ವೇ ಸಾಮಾನ್ಯವಾಗಿದ್ದು ಈಗ ಕರ್ನಾಟಕದ ಗಡಿ ಜಿಲ್ಲೆಯಾದ ಕಾರವಾರದಂತ ನಿಸರ್ಗ ಕಾಶಿಗೂ ಇದರ ಬಿಸಿ ತಟ್ಟಿದೆ.
Advertisement
Advertisement
ಹೌದು, ಇದೇನಿದು ಕಾರವಾರದ ಜನ ಮೀನು ತಿನ್ನುವುದು ಬಿಟ್ಟು ಕಪ್ಪೆ ತಿನ್ನಲು ಹೊರಟಿದ್ದಾರೆಯೇ ಎಂದು ನೀವು ಯೋಚಿಸಬಹುದು. ಖಂಡಿತಾ ಇಲ್ಲ, ಆದರೆ ಹಣದ ಆಸೆಗೆ ಅಕ್ರಮ ದಂಧೆಕೋರರು ಗಡಿನಾಡಿನ ಕಾರವಾರ ದಿಂದ ಗೋವಾದ ಐಷಾರಾಮಿ ಹೋಟಲ್ ಗಳಿಗೆ ಕಪ್ಪೆಗಳನ್ನು ಹಿಡಿದು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಿದ್ದಾರೆ. ಕಪ್ಪೆಗಳು ಈ ಹಿಂದೆ ವಿಜ್ಞಾನಿಗಳ ಪ್ರಯೋಗಕ್ಕಾಗಿ ಬಲಿಯಾಗುತ್ತಿದ್ದವು, 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ದೇಶದಲ್ಲಿ ಕಠಿಣವಾಗಿ ಜಾರಿಯಾದ ನಂತರ ಇದಕ್ಕೆ ಬ್ರೇಕ್ ಬಿದ್ದಿದೆ. ಆದರೆ ಗೋವಾದಂತ ಪ್ರವಾಸೋದ್ಯಮವನ್ನ ನಂಬಿರುವ ರಾಜ್ಯಗಳಲ್ಲಿ ವಿದೇಶಿ ಗ್ರಾಹಕರನ್ನು ಸೆಳೆಯಲು ಅವರ ಬಯಕೆಗಳನ್ನು ಈಡೇರಿಸಲು ಹೋಟೆಲ್ ಮಾಲೀಕರು ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ.
Advertisement
ಭಕ್ಷಕ್ಕೆ ಕಪ್ಪೆ ಬಳಕೆ
ಗೋವಾಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳನ್ನು ನೀಡುವ ಜೊತೆಯಲ್ಲಿ ಚೀನಾ, ರಷ್ಯಾದಿಂದ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಕಪ್ಪೆ ಗಳ ಭಕ್ಷವನ್ನು ನೀಡುವ ಮೂಲಕ ಹಣಗಳಿಸುತ್ತಿದ್ದಾರೆ. ಅಷ್ಟಕ್ಕೂ ಕಾರವಾರದ ಕಪ್ಪಗಳೇ ಏಕೆ ಅಕ್ರಮವಾಗಿ ಗೋವಾಕ್ಕೆ ಸರಬರಾಜುಮಾಡಲಾಗುತ್ತದೆ ಎಂಬ ಪ್ರಶ್ನೆ ಬಹುತೇಕ ಓದುಗರಲ್ಲಿ ಏಳುವುದು ಸಹಜ. ಹೌದು ಗೋವಾದಲ್ಲಿ ಕೂಡ ಕಾರವಾರದಲ್ಲಿ ಸಿಗುವಂತೆ ದೊಡ್ಡ ದೊಡ್ಡ ಕಪ್ಪೆಗಳು ಕಾಣಸಿಗುತ್ತವೆ. ಆದರೆ ಗೋವಾ ಸರ್ಕಾರದ ಅರಣ್ಯ ಇಲಾಖೆ ಹಾಗೂ ಅಲ್ಲಿನ ಎನ್‍ಜಿಒ ಗಳು ಇಲ್ಲಿನ ಕಪ್ಪೆ ಗಳನ್ನು ಹಿಡಿಯದಂತೆ ಜಾಗೃತಿ ವಹಿಸಿವೆ. ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಂಡು ಸ್ಥಳೀಯ ಜನರಲ್ಲಿ ಅರಿವು ಮೂಡಿಸಿದೆ. ಹೀಗಾಗಿ ಗೋವಾದಲ್ಲಿ ಕಪ್ಪೆಗಳನ್ನು ಹಿಡಿಯುವ ಜಾಲ ನಿಧಾನವಾಗಿ ತಮ್ಮ ಕಾಯಕವನ್ನು ಬಿಟ್ಟಿದ್ದಾರೆ. ಇದರಿಂದಾಗಿ ಗೋವಾ ಗಡಿಗೆ ಹೊಂದಿಕೊಂಡಿರುವ ಕಾರವಾರದಲ್ಲಿ ಈ ಜಾಲ ವಿಸ್ತಾರಗೊಂಡಿದ್ದು ಬಹು ಲಾಭದಾಯಕವಾಗಿ ಮಾರ್ಪಟ್ಟಿದೆ.
Advertisement
ಬುಲ್ ಫ್ರಾಗ್ ಗೆ ಹೆಚ್ಚಿನ ಬೇಡಿಕೆ: ಬುಲ್ ಫ್ರಾಗ್ ಎಂಬ ಪ್ರಬೇಧದ ದೊಡ್ಡ ಗಾತ್ರದ ಕಪ್ಪೆಗಳನ್ನು ಮಾಂಸ ಭಕ್ಷಣೆಗಾಗಿ ಉಪಯೋಗಿಸುತ್ತಾರೆ. ಈ ಕಪ್ಪೆಯು ಹೆಚ್ಚಾಗಿ ಕರಾವಳಿ ಭಾಗದ ಕಾರವಾರ, ಅಂಕೋಲ, ಹೊನ್ನಾವರ ಹಾಗೂ ಮಲೆನಾಡು ಭಾಗದ ಜೋಗ ಗಳಲ್ಲಿ ಅತಿಹೆಚ್ಚು ಕಾಣಸಿಗುತ್ತವೆ. ಜೂನ್ ತಿಂಗಳ ಮೊದಲ ಮಳೆಹನಿಗೆ ಹೊಲಗದ್ದೆಯತ್ತ ಮುಖಮಾಡುವ ಈ ಕಪ್ಪೆಗಳು ಗಾತ್ರದಲ್ಲಿ ಬಲು ದೊಡ್ಡದಿರುತ್ತವೆ. ಸುಮಾರು ನಾಲ್ಕು ವರ್ಷ ಬದುಕುತ್ತದೆ. ಜೂನ್ ತಿಂಗಳಲ್ಲಿ ಗಂಡು ಕಪ್ಪೆಯು ಹಳದಿ ಬಣ್ಣಕ್ಕೆ ತನ್ನ ದೇಹವನ್ನು ಪರಿವರ್ತಿಸಿಕೊಂಡು ಹೆಣ್ಣಿನೊಂದಿಗೆ ಮಿಲನ ಹೊಂದಿ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಸಮಯದಲ್ಲಿಯೇ ಈ ಕಪ್ಪೆಗಳನ್ನು ಅಕ್ರಮ ದಂಧೆಕೋರರು ಜೀವಂತ ಹಿಡಿದು ಬೇಡಿಕೆ ಇರುವ ಗೋವಾದ ಹೋಟಲ್ ಗಳಿಗೆ ಕಾಡಿನ ದಾರಿ ಮೂಲಕ ಸಾಗಿಸುತ್ತಾರೆ.
ಭಾರೀ ಬೆಲೆ: ಗೋವಾ ದಲ್ಲಿ ಈ ಕಪ್ಪೆಗಳಿಗೆ ಅತೀ ಹೆಚ್ಚು ಬೇಡಿಕೆ ಹುಟ್ಟಿಕೊಂಡಿದೆ. ಕಪ್ಪೆಗಳ ಗಾತ್ರಕ್ಕೆ ಅನುಗುಣವಾಗಿ ಒಂದು ಕೆಜಿಗೆ ನಾಲ್ಕು ಸಾವಿರದಿಂದ ಏಳು ಸಾವಿರದವರೆಗೆ ಬೆಲೆ ಸಿಗುತ್ತದೆ. ಜೀವಂತವಾಗಿಯೇ ತರುವ ಈ ಕಪ್ಪೆಗಳ ಹೆಚ್ಚು ಮಾಂಸವಿರುವ ಹಿಂಭಾಗದ ಕಾಲುಗಳನ್ನು ಮಾತ್ರ ತುಂಡರಿಸಿ ತೂಕ ಹಾಕಲಾಗುತ್ತದೆ. ಒಂದು ಕೆಜಿ ಮಾಂಸಕ್ಕಾಗಿ ಕನಿಷ್ಟ 200 ಕಪ್ಪೆಗಳು ಬಲಿಯಾಗುತ್ತವೆ.
ಜೀವಂತ ಕಪ್ಪೆಗಳಿಗಷ್ಟೇ ಬೇಡಿಕೆ: ಈ ದಂಧೆಯಲ್ಲಿ ಭಾಗಿಯಾಗಿ ಜೈಲುವಾಸ ಮಾಡಿದ ವ್ಯಕ್ತಿಯೊಬ್ಬರು ಹೇಳುವಂತೆ ಗೋವಾದಲ್ಲಿ ಬುಲ್ ಫ್ರಾಗ್ ಕಪ್ಪೆಗಳ ಹಿಂಭಾಗದ ಕಾಲುಗಳನ್ನು ಮಾತ್ರ ಸೂಪ್ ಹಾಗೂ ಫ್ರೈ ಮಾಡಲು ಬಳಸುತ್ತಾರೆ. ಜೀವಂತವಿರುವ ಕಪ್ಪೆಯ ಕಾಲನ್ನು ಮಾತ್ರ ಬಳಸಲಾಗುತ್ತದೆ, ಸತ್ತ ಕಪ್ಪೆಗೆ ಬೆಲೆ ಇರುವುದಿಲ್ಲ. ಹೀಗಾಗಿ ಜೀವಂತ ಕಪ್ಪೆಗಳನ್ನೇ ನೀಡಬೇಕು. ಗೋವಾಕ್ಕೆ ಬರುವ ವಿದೇಶಿಯರಲ್ಲಿ “ಜಂಪಿಂಗ್ ಚಿಕನ್” ಎಂದೇ ಕಪ್ಪೆಗಳ ಖಾದ್ಯ ಪ್ರಸಿದ್ಧವಾಗಿದೆ. ಐಷಾರಾಮಿ ಹೋಟೆಲ್ ಗಳಲ್ಲಿ, ಕೆಲವು ಡೇರಾಗಳಲ್ಲಿ ಮಾತ್ರ ಇವು ಸಿಗುತ್ತವೆ. ವಿದೇಶಿಯರಲ್ಲಿ ಅದರಲ್ಲೂ ರಷ್ಯಾ ಪ್ರವಾಸಿರು ಮದ್ಯ ಹಾಗೂ ಅಮಲು ಪದಾರ್ಥ ಸೇವಿಸುವಾಗ ಇದನ್ನು ಬಳಸುತ್ತಾರೆ. ಅವರಿಗೆ ಅತೀ ಇಷ್ಟವಾದ ಖಾದ್ಯವಾಗಿದೆ. ಹೀಗಾಗಿ ಎಷ್ಟು ಹಣ ಕೊಟ್ಟು ಬೇಕಾದರೂ ಕೊಂಡುಕೊಳ್ಳುತ್ತಾರೆ. ಹಿಂದೆ ಒಂದು ಕೆ.ಜಿಗೆ 500 ರಿಂದ ಹೆಚ್ಚು ಎಂದರೆ ಸಾವಿರ ಬೆಲೆ ಇರುತಿತ್ತು, ಗೋವಾದಲ್ಲಿನ ಸ್ಥಳೀಯ ಪೊಲೀಸರ ಹಾಗೂ ಎನ್‍ಜಿಒ ಗಳು ಸಕ್ರೀಯವಾಗಿ ಇವುಗಳ ರಕ್ಷಣೆಗೆ ನಿಂತಿದ್ದರಿಂದ ಬೇಡಿಕೆ ಜೊತೆ ಬೆಲೆಯೂ ದುಪ್ಪಟ್ಟಾಗಿದೆ. ಹೀಗಾಗಿ ಗೋವಾದ ಹೋಟೆಲ್ ನವರು ವಿದೇಶಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೆಚ್ಚು ಕಪ್ಪೆಗಳ ಸಂತತಿ ಇರುವ ಕಾರವಾರದತ್ತ ಮುಖಮಾಡಿದ್ದಾರೆ ಎಂದು ಜನ ಹೇಳಿದ್ದಾರೆ.
ವಿನಾಶದ ಅಂಚಿನತ್ತ ಪ್ರಭೇದಗಳು: ಉತ್ತರ ಕನ್ನಡ ಜಿಲ್ಲೆಯಲ್ಲಿ 35 ವಿವಿಧ ಜಾತಿಯ ಕಪ್ಪೆ ಪ್ರಭೇದಗಳಿವೆ. ಇವುಗಳಲ್ಲಿ ಮಲಬಾರ್ ಟ್ರೀಥೋಡ್, ಅಂಬೂಲಿ ಬುಷ್ ಫ್ರಾಗ್, ಕರಾವಳಿ ಚಿಮ್ಮುವ ಕಪ್ಪೆ, ಕೆಂಪುಳೆ ನೈಟ್ ಫ್ರಾಗ್ ಎಂಬ ನಾಲ್ಕು ಪ್ರಭೇದಗಳ ಕಪ್ಪೆಗಳು ಅಳಿವಿನಂಚಿನಲ್ಲಿವೆ. ಕರಾವಳಿ ಭಾಗದ ಸರ್ವೇಸಾಮಾನ್ಯವಾಗಿ ಬುಲ್ ಫ್ರಾಗ್ ಹಾಗೂ ಪಂಗಲ್ ಫ್ರಾಗ್ ಗಳು ಹೇರಳವಾಗಿವೆ. ಕೇರಳದ ಸಂಶೋಧನಾ ತಂಡವೊಂದು ಪಂಗಲ್ ಫ್ರಾಗ್ ಕಪ್ಪೆಯ ಮೇಲೆ ಸಂಶೋಧನೆ ನಡೆಸಿ ಈ ಕಪ್ಪೆಯ ದೇಹದ ಮೇಲ್ಭಾಗದಲ್ಲಿರುವ URVMI ಎಂಬ ರಾಸಾಯನಿಕ ದ್ರವವನ್ನು ಪರೀಕ್ಷೆಗೊಳಪಡಿಸಿ ಈ ರಾಸಾಯನಿಕದಿಂದ ಹೆಚ್ 1 ಎನ್1 ರೋಗವನ್ನು ಗುಣಪಡಿಸುವ ಶಕ್ತಿ ಇದೆ ಎಂದು ಕಂಡುಹಿಡಿದಿದೆ. ಬುಲ್ ಫ್ರಾಗ್ ಗಳು ಪ್ರತಿ ವರ್ಷ ಮಾಂಸಕ್ಕಾಗಿ ಭೇಟೆ ನಡೆಯುತ್ತಿದೆ.
ಅರಣ್ಯ ಇಲಾಖೆ ಕಠಿಣ ಕ್ರಮ ಅಗತ್ಯ: ಸದ್ಯ ಕರ್ನಾಟಕ ಇಲಾಖೆ ಕಪ್ಪೆಗಳ ಬೇಟೆ ಹತ್ತಿಕ್ಕಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಕಳ್ಳಹಾದಿಯಲ್ಲಿ ಇವುಗಳನ್ನು ಗೋವಾಕ್ಕೆ ಸಾಗಾಣೆ ಮಾಡಲಾಗುತ್ತಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳ ಒಳಗಡೆ ಹೆಚ್ಚು ಸಾಗಾಣಿಕೆಯಾಗುತ್ತದೆ. ಗೋವಾ ಅರಣ್ಯ ಅಧಿಕಾರಿಗಳ ಸಹಕಾರ ಸಿಕ್ಕಲ್ಲಿ ಸಂಪೂರ್ಣವಾಗಿ ಬಂದ್ ಮಾಡಬಹುದು.
ಜಾಗೃತಿ ಕೊರತೆ: ಕಪ್ಪೆಗಳ ಬಗ್ಗೆ ನಮ್ಮಲ್ಲಿ ಅಧ್ಯಯನದ ಕೊರತೆಯಿದೆ, ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ಮುಖ್ಯ. ಕಪ್ಪೆಗಳು ಜನರಲ್ಲಿ ನಿರ್ಲಕ್ಷಿತ ಉಭಯಜೀವಿಗಳಾಗಿವೆ. ಹೀಗಾಗಿ ಇವುಗಳ ಬಗ್ಗೆ ಯಾರೂ ತಲೆಕೆಡೆಸಿಕೊಳ್ಳದಿರುವುದೇ ಇವುಗಳ ನಾಶಕ್ಕೆ ಮೂಲಕಾರಣವಾಗಿದೆ. ಅರಣ್ಯ ಇಲಾಖೆಯಲ್ಲಿ ಆಸಕ್ತ ಯುವ ಅಧಿಕಾರಿಗಳಿದ್ದಾರೆ ಇವರಿಗೆ ಇಲಾಖೆಯಿಂದ ಪ್ರೋತ್ಸಾಹ ನೀಡಿದಲ್ಲಿ ಕಪ್ಪೆಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ. ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನವಾಗಬೇಕು ಎನ್ನುತ್ತಾರೆ ಇವುಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಉರಗ ತಜ್ಞರು ಹಾಗೂ ಕಾಳಿ ರಕ್ಷಿತಾರಣ್ಯ ವಿಭಾಗದ ಕುಳಗಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಿ.ಆರ್.ನಾಯಕ್.
ಗೋಕರ್ಣಕ್ಕೂ ವ್ಯಾಪಿಸಿದ ದಂಧೆ: ಇನ್ನು ನೆರೆಯ ಗೋವಾ ಅಲ್ಲದೇ ವಿದೇಶಿಯರು ಹೆಚ್ಚು ಆಗಮಿಸುವ ಗೋಕರ್ಣದಂತಹ ಧಾರ್ಮಿಕ ಕ್ಷೇತ್ರಕ್ಕೂ ಈ ದಂಧೆ ಅಂಟಿಕೊಂಡಿದೆ. ಗಾಂಜಾ, ಅಫೀಮು ಸುಲಭವಾಗಿ ಸಿಗುವಂತೆ ಇಲ್ಲಿಯೂ ಕೂಡ ಬುಲ್ ಫ್ರಾಗ್ ಭಕ್ಷಣೆ ನಡೆಯುತ್ತಿದೆ. ಕೇವಲ ವಿದೇಶಿಯರಿಗೆ ಮಾತ್ರ ಈ ಮಾಂಸವನ್ನು ನೀಡಲಾಗುತ್ತಿದೆ. ಅಕ್ರಮ ಸಾಗಾಣೆದಾರರು ಕೈತುಂಬಾ ಹಣ ಗಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ಅಕ್ರಮ ಕಪ್ಪೆ ಸಾಗಾಟದಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿದೆ. ಇದನ್ನು ಬಿಟ್ಟರೇ ಅರಣ್ಯ ಇಲಾಖೆ ನಿರ್ಲಕ್ಷ ಎದ್ದು ತೋರುತ್ತಿದ್ದು ಪ್ರಾಣಿಗಳ ರಕ್ಷಣೆಗೆ ಗಮನ ಹರಿಸಿದ ಒಂದು ಭಾಗದಷ್ಟಾದರೂ ಗಮನಹರಿಸಿದಲ್ಲಿ ಅವನತಿಯಲ್ಲಿರುವ ಕಪ್ಪೆಗಳ ರಕ್ಷಣೆಯಾದಂತಾಗುತ್ತದೆ.