ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ 2ನೇ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಪೀಠಾಧಿಪತಿಗಳ ಬದಲಾವಣೆ ಕೂಗು ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (B S Yediyurappa) ಎದುರು ವೀರಶೈವ ಲಿಂಗಾಯತರು ಪ್ರಸ್ತಾವನೆ ಮುಂದಿಟ್ಟ ಬೆನ್ನಲ್ಲೇ ಇದೀಗ ನಾನಾ ಸುದ್ದಿಗಳು ಮಠದ ಆವರಣದಲ್ಲಿ ಹರಡಿದೆ. ಸರ್ಕಾರ ಕೂಡ ಶ್ರೀಗಳ ಬದಲಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ್ದು, ಕೋರ್ಟ್ ಬೆಳವಣಿಗೆಗಳನ್ನು ಕಾದು ನೋಡುತ್ತಿದೆ.
ನೂತನ ಪೀಠಾಧಿಪತಿಗಳ ರೇಸ್‍ನಲ್ಲಿ ಆರು ಸ್ವಾಮೀಜಿಗಳಿದ್ದಾರೆ. ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್ ಬಿ ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಲಾಗಿದೆ. ಮುರುಘಾ ಶ್ರೀಗಳು ಅಧಿಕೃತವಾಗಿ ನೋಟರಿ ಮಾಡಿ ಪವರ್ ಆಫ್ ಅಟಾರ್ನಿ ನೀಡಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಎಸ್ ಜೆ ಎಂ ವಿದ್ಯಾಪೀಠದ ಚೆಕ್ ಸಹಿ ಸೇರಿ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ಪವರ್ ಆಫ್ ಅಟಾರ್ನಿ ನೀಡಲಾಗಿದೆ.
ಹೊಸ ಪೀಠಾಧಿಪತಿ ಯಾರಾಗ್ತಾರೆ?
> ಮಲ್ಲಿಕಾರ್ಜುನ ದೇವರು- ಸರ್ಪಭೂಷಣ ಮಠ, ಬೆಂಗಳೂರು
> ಮಹಾಂತ ರುದ್ರೇಶ್ವರ ಶ್ರೀ- ಹೆಬ್ಬಾಳ ಮಠ
> ಬಸವಪ್ರಭು ಶ್ರೀ- ವಿರಕ್ತ ಮಠ, ದಾವಣಗೆರೆ
> ಶಾಂತವೀರ ಶ್ರೀ- ಗುರುಮಿಠ್ಕಲ್ ಮಠ, ಯಾದಗಿರಿ
> ಶಿವಬಸವ ಶ್ರೀ- ಅಥಣಿ ಮಠ, ಬೆಳಗಾವಿ
> ಸಿದ್ಧರಾಮ ಶ್ರೀ- ಇಳಕಲ್ ಮಠ
ಮುರುಘಾ ಶ್ರೀ (Murugha Shree) ಗಳ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗ್ತಿದ್ದಂತೆ ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಇರುವ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿತ್ತು. ಆ ಕೇಸ್‍ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಮಗುವಿನಂತೆ ಅನೇಕರು ಮಠದಲ್ಲಿದ್ದಾರೆಂಬ ಸ್ಪೋಟಕ ಮಾಹಿತಿಯನ್ನು ಮಠದ ಮುಂಭಾಗದಲ್ಲಿ ಅಂಗಡಿ ನಡೆಸುವ ಫೈರೋಜಾ ಎಂಬ ಮಹಿಳೆ ಹೊರಹಾಕಿದ್ದಾರೆ. ಈ ಹಿಂದೆಯೂ ಕಳೆದ 17-18 ವರ್ಷಗಳ ಹಿಂದೆಯೂ ಓರ್ವ ಬಾಲಕಿ ಮಠದ ಮುಭಾಗದ ಕೆರೆ ಸಮೀಪ ಪತ್ತೆಯಾಗಿದ್ಳು. ಆಕೆಗೆ ನಿರ್ಣಯ ಎಂಬ ಹೆಸರಿಲಾಗಿತ್ತು. ಆದ್ರೆ ಈಗ ಎಲ್ಲಿದ್ದಾಳೆಂಬ ಮಾಹಿತಿ ಸಹ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ
ಮಠದ ಬಳಿ ಈ ಹಿಂದೆ ಅನೇಕ ಬಾರಿ ನವಜಾತ ಶಿಶುಗಳನ್ನು ಎಸೆದು ಹೋಗ್ತಿದ್ದ ಹಿನ್ನಲೆಯಲ್ಲಿ ಅಂದಿನಿಂದ ಬಸವ ಮಕ್ಕಳೆಂಬ ಹೆಸರಲ್ಲಿ ಅಂತಹ ಮಕ್ಕಳನ್ನು ಪಾಲನೆ ಮಾಡುವ ಸಂಪ್ರದಾಯವು ರೂಡಿಯಲ್ಲಿದ್ಯಂತೆ. ಆದ್ರೆ ಶಿವಮೂರ್ತಿ ಮುರುಘಾ ಶರಣರು ಪೀಠಾಧಿಪತಿಯಾದ ಬಳಿಕ ಮಠದ ದ್ವಾರ ಬಾಗಿಲಲ್ಲೇ ಹೈಟೆಕ್ ತೊಟ್ಟಿಲನ್ನು ಇಡಸಲಾಗಿದೆ. ಆದರೆ ಆ ತೊಟ್ಟಿಲಿಂದ ಎಷ್ಟು ಜನ ಮಕ್ಕಳು ಮಠಕ್ಕೆ ಸೇರಿವೆ ಎಂಬ ಬಗ್ಗೆ ಯಾವ್ದೇ ದಾಖಲೆಗಳು ಇಲ್ಲದಿರೋದು ಬಾರಿ ಅನುಮಾನಕ್ಕೆ ಕಾರಣವಾಗಿದೆ.
ಮಠದ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಆ ಇಬ್ಬರು ಮಕ್ಕಳ ಜೊತೆ ಮಕ್ಕಳ ಕಲ್ಯಾಣ ಸಮಿತಿ ಆಪ್ತ ಸಮಾಲೋಚನೆ ನಡೆಸಿದೆ. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಅಂತ ಆ ಮಕ್ಕಳು ಹೇಳಿರೋದಾಗಿ ತಿಳಿದುಬಂದಿದೆ. 2ನೇ ಫೋಕ್ಸೋ ಕೇಸಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ತನಿಖಾಧಿಕಾರಿ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರನ್ನ ಕರೆತಂದರೆ ಸಂತ್ರಸ್ತ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಮುರುಘಾಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸುವ ಸಾಧ್ಯತೆಯೂ ಇದೆ.