ನವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಗೊಂದಲ ಮುಂದುವರಿದಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ದಲಿತರಿಗೆ (Dalit CM), ಅದರಲ್ಲೂ ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಡಾ. ಬಿಆರ್ ಅಂಬೇಡ್ಕರ್ ದಲಿತಾ ಸೇವಾ ಸಮಿತಿ ಆಗ್ರಹಿಸಿದೆ.
ದೆಹಲಿಯಲ್ಲಿರುವ ಎಐಸಿಸಿ ಕಚೇರಿ ಇಂದಿರಾ ಭವನಕ್ಕೆ ಆಗಮಿಸಿದ ಡಾ. ಬಿಆರ್ ಅಂಬೇಡ್ಕರ್ ದಲಿತಾ ಸೇವಾ ಸಮಿತಿ ಸದಸ್ಯರು ಹಾಗೂ ತುಮಕೂರು ಮೂಲದ ಕೆಲವು ಕಾಂಗ್ರೆಸ್ ನಾಯಕರು ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಜನವರಿ 9ರ ಬಳಿಕವಷ್ಟೆ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ
ಎಐಸಿಸಿ ಕಚೇರಿಗೆ ಆಗಮಿಸುವ ಮುನ್ನ ಕಾಂಗ್ರೆಸ್ ಸಂಘಟನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭೇಟಿಯಾದ ಸದಸ್ಯರು ಜಿ.ಪರಮೇಶ್ವರ್‌ಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸೋನಿಯ ಗಾಂಧಿ ಅವರ ನಿವಾಸಕ್ಕೂ ಮನವಿ ಪತ್ರವನ್ನು ರವಾನಿಸಿದರು.
ಎಐಸಿಸಿ ಕಚೇರಿ ಬಳಿ ಮಾತನಾಡಿದ ಸದಸ್ಯರು, ದಲಿತ ಸಮುದಾಯ ದಶಕಗಳಿಂದ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿದೆ. ಹೀಗಾಗಿ, ದಲಿತ ನಾಯಕರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಜಿ.ಪರಮೇಶ್ವರ್ ಪಕ್ಷನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. 2013 ರಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಈ ಹಿನ್ನೆಲೆ ದಲಿತರಿಗೆ ಸಿಎಂ ಸ್ಥಾನ ನೀಡುವ ಮೂಲಕ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ: ವಿಜಯೇಂದ್ರ ಸ್ಪಷ್ಟನೆ

