ಗೋವಾದಲ್ಲಿ ಜಂಪಿಂಗ್ ಚಿಕನ್‍ಗೆ ಭಾರೀ ಬೇಡಿಕೆ- ಕಾರವಾರದಿಂದ ಅಪರೂಪದ ಕಪ್ಪೆಗಳ ಅಕ್ರಮ ಸಾಗಾಟ

Public TV
3 Min Read
kwr bull frog 1

ಕಾರವಾರ: ಮಳೆಗಾಲ ಬಂತೆಂದರೇ ಸಾಕು ಕಪ್ಪೆಗಳು ಒಟಗುಟ್ಟುವುದು ಮಾಮೂಲು. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಪ್ಪೆಗಳು ಒಟಗುಟ್ಟುವುಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಾವಳಿ ಭಾಗದಲ್ಲಿ ಆಹಾರಕ್ಕಾಗಿ ಮೀನುಗಳಿಗೆ ಹೇಗೆ ಬೇಡಿಕೆಯಿದೆಯೋ ಹಾಗೆಯೇ ಕಪ್ಪೆಗಳಿಗೂ ಬೇಡಿಕೆ ಹೆಚ್ಚಾಗತೊಡಗಿದೆ. ಜೀವಂತ ಕಪ್ಪೆಗಳ ಬೇಡಿಕೆ ಹೆಚ್ಚಾಗುತ್ತರಿವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

kwr bull frog 4

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಇಂಡಿಯನ್ ಬುಲ್ ಫ್ರಾಗ್ ಕಪ್ಪೆಗಳ ಮಾಂಸಕ್ಕೆ ನೆರೆಯ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪೆಗಳ ಮಾಂಸಕ್ಕೆ ಗೋವಾ ಜನತೆ ಅಷ್ಟೇ ಅಲ್ಲದೆ ವಿದೇಶಿಯರೂ ಕೂಡ ಮಾರುಹೋಗಿದ್ದಾರೆ.

ಕರ್ನಾಟಕ, ಗೋವಾದಲ್ಲಿ ಈ ಕಪ್ಪೆಗಳ ಬೇಟೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ಈ ಕಪ್ಪೆಗಳ ಅಕ್ರಮ ಸಾಗಾಟದ ಮೂಲಕ ರೆಸ್ಟೋರೆಂಟ್ ತಲುಪುತ್ತಿವೆ. ಬಳಿಕ ಜಂಪಿಂಗ್ ಚಿಕನ್ ಎಂಬ ಹೆಸರಿನ ಖಾದ್ಯಗಳಾಗಿ ಮಾರಾಟ ಮಾರಾಟವಾಗುತ್ತಿವೆ.

kwr bull frog 3

ಗೋವಾದಲ್ಲಿ ಅಳವಿನಂಚಿನಲ್ಲಿರುವ ಇಂಡಿಯನ್ ಬುಲ್ ಫ್ರಾಗ್ ಗಳನ್ನು ಹಿಡಿಯದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲಾಗಿದೆ. ಇದರಿಂದಾಗಿ ರೆಸ್ಟೋರೆಂಟ್ ಮಾಲೀಕರು ತಮ್ಮ ಗ್ರಾಹಕರನ್ನು ತೃಪ್ತಿ ಪಡಿಸಲು ಕರ್ನಾಟಕದ ಕಾರವಾರದ ಕಡೆ ಮುಖ ಮಾಡಿದ್ದಾರೆ. ಗಾತ್ರಕ್ಕೆ ಅನುಗುಣವಾಗಿ ಒಂದು ಕಪ್ಪೆಯ ಬೆಲೆ 600 ರಿಂದ 1000 ರೂ. ಮಾರಾಟವಾಗುತ್ತದೆ. ಇದನ್ನೂ ಓದಿ: ವಿದೇಶಿಗರ ಹೊಟ್ಟೆ ಸೇರಿದ ಕಾರವಾರದ ಕಪ್ಪೆಗಳು – ಅಪಾಯದ ಅಂಚಿನಲ್ಲಿ ಕಪ್ಪೆ ಜೀವ ಸಂಕುಲ

ಹೇಗೆ ಹಿಡಿಯುತ್ತಾರೆ:
ಮಳೆಗಾಲ ಪ್ರಾರಂಭದಲ್ಲಿ ಇಂಡಿಯನ್ ಬುಲ್ ಫ್ರಾಗ್‍ಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಹೊರಬರುವ ಇವು ಕರಾವಳಿ ಭಾಗದ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಗಾತ್ರದಲ್ಲಿ ಎಲ್ಲಾ ಕಪ್ಪೆಗಳಿಗಿಂತ ಅತೀ ದೊಡ್ಡದಿದ್ದು ಇವುಗಳನ್ನು ಗುರುತಿಸುವುದು ಸುಲಭ. ಹೀಗಾಗಿ ಭೇಟೆಗಾರರು ಇವುಗಳನ್ನು ಜೀವಂತವಾಗಿ ಹಿಡಿಯುತ್ತಾರೆ.

kwr bull frog 2

ಜೀವಂತವಾಗಿ ಹಿಡಿದು ಪ್ರೈ ಮಾಡ್ತಾರೆ!
ಈ ಕಪ್ಪೆಗಳನ್ನು ಖಾದ್ಯ ತಯಾರಿಸುವವರೆಗೂ ಕೊಂದು ಮಾಂಸ ಬೇರ್ಪಡಿಸುವಂತಿಲ್ಲ. ಹೀಗಾಗಿ ಬೇಟೆಗಾರರು ಇವುಗಳನ್ನು ಜೀವಂತ ಹಿಡಿದು ಸಾಗಿಸುತ್ತಾರೆ. ರೆಸ್ಟೋರೆಂಟ್‍ಗಳಲ್ಲಿ ಇವುಗಳ ದೇಹಕ್ಕಿಂತ ತೊಡೆ ಭಾಗಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಕಪ್ಪೆಗಳ ತೊಡೆ ಭಾಗವನ್ನು ಕತ್ತರಿಸಿ ಉಳಿದ ಭಾಗವನ್ನು ಎಸೆಯುತ್ತಾರೆ. ತೊಡೆ ಭಾಗದಲ್ಲಿ ಹೆಚ್ಚಿನ ಮಾಂಸ ಇರುವುದರಿಂದ ಸೂಫ್, ಫ್ರೈ ಮುಂತಾದ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

KWR BULL Frog A 3

ಯಾರ ಬೇಡಿಕೆ!?
ಈ ಕಪ್ಪೆಗಳ ಖಾದ್ಯಕ್ಕೆ ವಿದೇಶಿಯರೇ ಹೆಚ್ಚು ಬೇಡಿಕೆ ಹೊಂದಿದ್ದಾರೆ. ಚೀನಾ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಟರ್ಕಿ, ಟಿಬೆಟ್ ದೇಶದ ಪ್ರಜೆಗಳು ಇಂಡಿಯನ್ ಬುಲ್ ಫ್ರಾಗ್‍ಗಳ ಖಾದ್ಯಕ್ಕೆ ಹೆಚ್ಚು ಹಣ ಕೊಟ್ಟು ಸವಿಯುತ್ತಾರೆ. ಭಾರತದ ಮುಂಬೈ, ಬೆಂಗಾಲ್ ಪ್ರದೇಶದ ಪ್ರವಾಸಿಗರು ಸಹ ಜಂಪಿಂಗ್ ಚಿಕನ್‍ಗೆ ಮಾರುಹೋಗಿದ್ದು, ಗೋವಾಕ್ಕೆ ಪ್ರವಾಸ ಬಂದ ರೆಸ್ಟೋರೆಂಟ್‍ಗಳಲ್ಲಿ ಹೆಚ್ಚಿನ ಬೇಡಿಕೆ ಇಡುತ್ತಾರೆ. ಹೀಗಾಗಿ ಈ ಬೇಡಿಕೆಯೇ ಕಪ್ಪೆಗಳ ಭೇಟೆಗೆ ಕಾರಣವಾಗುತ್ತಿದ್ದು ಕರ್ನಾಟಕದ ಕಳ್ಳ ಹಾದಿಯಿಂದ ಗೋವಾ ಹಾಗೂ ಮುಂಬೈನ ರೆಸ್ಟೋರೆಂಟ್‍ಗೆ ರವಾನೆಯಾಗುತ್ತಿವೆ.

KWR BULL Frog A 1

ಅರಣ್ಯ ಇಲಾಖೆ ಹೇಳೋದೇನು?:
ಮೊದಲು ಈ ಕಪ್ಪೆಗಳ ಅಕ್ರಮ ಸಾಗಾಟದ ಬಗ್ಗೆ ಮಾಹಿತಿ ಇರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕಾರವಾರದ ಗಡಿಯಲ್ಲಿ ಸಾಗಾಟ ಮಾಟುವಾಗ ಕಪ್ಪೆಗಳ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದರು. ಬಳಿಕ ಅವುಗಳನ್ನು ಭಕ್ಷಣೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಹೊರ ಜಗತ್ತಿಗೆ ಗೊತ್ತಾಗಿತ್ತು. ಈ ಬಗ್ಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಆರಂಭದಿಂದ ಗಡಿಭಾಗದಲ್ಲಿ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಪಾಸಣೆ ಮಾಡಲಾಗುತ್ತಿದೆ ಎಂದು ಕಾರವಾರದ ಎಸಿಎಫ್ ಮಂಜುನಾಥ್ ನಾವಿ ತಿಳಿಸಿದ್ದಾರೆ.

KWR BULL Frog A 2

ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಸಾಗಾಟ ಮಾಡುವವರು ಅಥವಾ ಸಂಶಯಾಸ್ಪದ ವ್ಯಕ್ತಿಗಳು ಬಸ್‍ನಲ್ಲಿ ಕಂಡರೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಭಟ್ಕಳದಿಂದ ಕಾರವಾರದವರೆಗೂ ಅರಣ್ಯ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸಾಗಾಟ ಮಾಡುವಾಗ ಅಂಕೋಲದ ವ್ಯಕ್ತಿಯೊಬ್ಬರು ಸಿಕ್ಕಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.

ಮಳೆಗಾಲ ಆರಂಭವಾದರೆ ಕಪ್ಪೆಗಳ ಅಕ್ರಮ ಸಾಗಾಟ ಜಾಲಗಳು ತಮ್ಮ ಚಟುವಟಿಕೆ ಪ್ರಾರಂಭಿಸುತ್ತವೆ. ಇದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಮಂಜುನಾಥ್ ನಾವಿ ಮಾಹಿತಿ ನೀಡಿದ್ದಾರೆ.

Frog 6

ಕಪ್ಪೆಗಳ ಅಕ್ರಮ ಸಾಗಾಟ ಜಾಲ ಕಾರವಾರ, ಅಂಕೋಲ ಹಾಗೂ ಭಟ್ಕಳದಲ್ಲಿ ಹೆಚ್ಚಾಗಿವೆ. ಪರಿಸರ ಚಕ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಈ ಕಪ್ಪೆಗಳು ಪರಿಸರ ವೈದ್ಯ ಎಂದೇ ಪ್ರಸಿದ್ಧಿ ಹೊಂದಿವೆ. ಗಾತ್ರದಲ್ಲಿ ದೊಡ್ಡದಿರುವ ವಿಶೇಷ ಕಪ್ಪೆಗಳು ಕೇವಲ ಕರಾವಳಿ ಭಾಗದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸುತ್ತವೆ. ಈಗ ಇವುಗಳ ಅಕ್ರಮ ಬೇಟೆಯಿಂದ ಸಂತತಿ ಸಹ ಕ್ಷೀಣಿಸುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *