ರಾಮನಗರ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಗೊಂದಲದ ವಿಚಾರವಾಗಿ ಸುಮಲತಾ ಅವರು ಮಾಡುತ್ತಿರುವ ಆರೋಪ ಸತ್ಯವಿರಬಹುದು. ಹಾಗಾಗಿ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ವಿಶೇಷ ಚುನಾವಣಾ ವೀಕ್ಷಕರನ್ನು ನೇಮಿಸುವಂತೆ ಮನವಿ ಮಾಡುವುದಾಗಿ ಬಿಜೆಪಿ ಶಾಸಕ ಸಿ.ಟಿ ರವಿ ತಿಳಿಸಿದ್ದಾರೆ.
ರಾಮನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಲತಾ ಅವರ ಆರೋಪ ಸತ್ಯ ಎಂದು ನನಗನಿಸುತ್ತಿದೆ. ಮಾಡಿಫೈಡ್ ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗದ ನಿಯಮದ ಪ್ರಕಾರ ನಾಮಪತ್ರ ಸಲ್ಲಿಸುವ ಕಡೆಯ ದಿನ ಸಲ್ಲಿಸಬಹುದು. ಆದರೆ ಪರಿಶೀಲನೆ ಸಮಯದಲ್ಲಿ ಸಲ್ಲಿಸಲು ಅವಕಾಶವಿಲ್ಲ. ಮೈತ್ರಿ ಅಭ್ಯರ್ಥಿಯ ಮಾಡಿಫೈಡ್ ಅಫಿಡವಿಟನ್ನು ಪರಿಶೀಲನೆ ವೇಳೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ಮೇಲ್ನೋಟಕ್ಕೆ ಪಕ್ಷಪಾತದ ಧೋರಣೆ ಎಂದು ತಿಳಿಸಿದರು.
Advertisement
Advertisement
ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧವೇ ನೋಟಿಸ್ ನೀಡಿದ್ದಾರೆ. ಇವತ್ತು ಪ್ರಚಾರದ ವೇಳೆ ನಾಯಕನ ವಾಹನದ ಹಿಂದೆ 10 ರಿಂದ 20 ಪರ್ಮಿಟ್ ಇಲ್ಲದ ವಾಹನಗಳು ಓಡಾಡುತ್ತಿವೆ. ಏನೂ ಕ್ರಮ ತೆಗೆದುಕೊಳ್ಳದೇ ಪ್ರಶ್ನಿಸಿದವರ ವಿರುದ್ಧ ನೋಟಿಸ್ ನೀಡುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮೂಲಕ ಪ್ರಶ್ನಿಸುವವರ ಹತ್ತಿಕುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರಕ್ಕೆ ವಿಶೇಷ ವೀಕ್ಷಕರನ್ನ ನೇಮಿಸುವಂತೆ ಮನವಿ ಮಾಡಲಾಗುವುದು ಎಂದರು.
Advertisement
ಕ್ಷೇತ್ರಗಳಲ್ಲಿ ಹಣಬಲ, ಅಧಿಕಾರದ ಬಲ ದುರುಪಯೋಗವಾಗುವ ಸಾಧ್ಯತೆಗಳಿವೆ. ಅಲ್ಲದೇ ಪಾರದರ್ಶಕತೆ ಕಾಪಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಸೂಚನೆ ನೀಡಬೇಕು ಎಂದು ತಿಳಿಸಿದರು.