– 1 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ
– 24*7 ನಾಲ್ಕೈದು ಗನ್‌ಮ್ಯಾನ್‌ಗಳಿಂದ ಭದ್ರತೆ
ನವದೆಹಲಿ: ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದರೋಡೆಕೋರ ಹಾಶಿಮ್ ಬಾಬಾನ ಪತ್ನಿಯನ್ನು ದೆಹಲಿಯ ವಿಶೇಷ ಕೋಶ (Delhi’s Special Cell) ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದೆ.
ಜೋಯಾ ಖಾನ್ (Zoya Khan) ಅಲಿಯಾಸ್ ಲೇಡಿ ಡಾನ್ ಬಂಧಿತ ಮಹಿಳೆ. ಜೋಯಾ ಬಂಧನದ ವೇಳೆ 1 ಕೋಟಿ ರೂ. ಮೌಲ್ಯದ 270 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ. ಲೇಡಿ ಡಾನ್ ಎಂದೇ ಗುರುತಿಸಿಕೊಂಡಿದ್ದ ಜೋಯಾ ತನ್ನ ಪತಿಯ ಅಕ್ರಮ ಚಟುವಟಿಕೆಗಳನ್ನು ಮುಂದೆ ನಿಂತು ನಡೆಸುತ್ತಿದ್ದಳು. ಆದ್ರೆ ಯಾವುದೇ ಪುರಾವೆಗಳಿಲ್ಲದ ಕಾರಣ ಆಕೆಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂಓದಿ: ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ
ದರೋಡೆಕೋರ ಹಾಶಿಮ್ ಬಾಬಾ (Hashim Baba), ಕೊಲೆ, ಸುಲಿಗೆ ಹಾಗೂ ಶಸ್ತ್ರಾಸ್ತ್ರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತನಾಗಿದ್ದು ತಿಹಾರ್ ಜೈಲಿನಲ್ಲಿ (Tihar Jail) ಶಿಕ್ಷೆ ಅನುಭವಿಸುತ್ತಿದ್ದಾನೆ. ಜೋಯಾಳಿಗೆ ಹಾಶಿಮ್ 2ನೇ ಪತಿ, ಹಾಶಿಮ್‌ಗೆ ಜೋಯಾ 3ನೇ ಹೆಂಡತಿಯಾಗಿದ್ದಳು. 2017ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ ಬಳಿಕ ಜೋಯಾ ಹಾಶಿಮ್‌ನನ್ನ ವಿವಾಹವಾಗಿದ್ದಳು ಎನ್ನಲಾಗಿದೆ. ಇದನ್ನೂಓದಿ: ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಕೀಳು ಹೇಳಿಕೆ ಕೇಸ್ – ರಾಖಿ ಸಾವಂತ್‌ಗೆ ಸಮನ್ಸ್
ಜೋಯಾ ಬ್ಯಾಗ್ರೌಂಡ್ ಕಂಡು ಪೊಲೀಸರೇ ಶಾಕ್:
ಐಷಾರಾಮಿ ಜೀವನ ನಡೆಸುತ್ತಿದ್ದ ಜೋಯಾ ಪತಿ ಜೈಲು ಸೇರಿದ ನಂತರ ಖುದ್ದು ತಾನೇ ಅಂಡರ್‌ವರ್ಲ್ಡ್‌ಗೆ ಇಳಿದಿದ್ದಳು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪರ್ಕರ್‌ನಂತೆ ಗ್ಯಾಂಗ್ ಚಟುವಟಿಕೆ ನಡೆಸುತ್ತಿದ್ದಳು. ಡ್ರಗ್ಸ್, ಸುಲಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಸಹಾಯ ನೀಡುತ್ತಿದ್ದಳು. ಆಗಾಗ್ಗೆ ಬ್ರ್ಯಾಂಡೆಡ್ ಬಟ್ಟೆ ಧರಿಸಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು, ಆದ್ರೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವೂ ಇರಲಿಲ್ಲ. ಇದರೊಂದಿಗೆ ಜೈಲಿನಲ್ಲಿ ಪತಿ ನೋಡಲು ಬಂದಾಗ ಹಾಶಿಮ್ ಬಾಬಾ ಜೊತೆಗೆ ಗ್ಯಾಂಗ್‌ನ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಳು.
ಜೋಯಾ ತಾನೇ ಮುಂದೆ ನಿಂತು ಈ ಕುಕೃತ್ಯಗಳನ್ನು ನಡೆಸುತ್ತಿರುವುದು ಗೊತ್ತಾದ ಬಳಿಕ ಆಕೆಯನ್ನ ಬಂಧಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದರು. ಅಷ್ಟೇ ಚಾಣಾಕ್ಷತೆಯಿಂದ ಜೋಯಾ ಎಸ್ಕೇಪ್ ಆಗುತ್ತಿದ್ದಳು. ಈ ಸಂಬಂಧ ರಹಸ್ಯ ಕಾರ್ಯಾಚರಣೆ ನಡೆಸಿದ ದೆಹಲಿ ವಿಶೇಷ ಕೋಶದ ಎಸಿಪಿ ಸಂಜಯ್ ದತ್ ಮತ್ತು ಇನ್ಸ್‌ಪೆಕ್ಟರ್ ಸಂದೀಪ್ ದಾಬಸ್ ನೇತೃತ್ವದ ತಂಡ ಲೇಡಿ ಡಾನ್‌ನನ್ನ ಡ್ರಗ್ಸ್ ಪ್ರಕರಣದಲ್ಲಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ಈಶಾನ್ಯ ದೆಹಲಿಯ ಸ್ವಾಗತ್ ಪ್ರದೇಶದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾಗಲೇ ಆಕೆಯನ್ನ ಬಂಧಿಸಿದ್ದಾರೆ. ಈ ವೇಳೆ 1 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಅಲ್ಲದೇ ಗ್ಯಾಂಗ್‌ಸ್ಟರ್ ನಾದಿರ್ ಶಾ ಹತ್ಯೆ ಪ್ರಕರಣದಲ್ಲಿ ಶೂಟರ್‌ಗಳಿಗೆ ಆಶ್ರಯ ನೀಡುವಲ್ಲೂ ಜೋಯಾ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂಓದಿ: ಭೀಕರ ಅಪಘಾತ – ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ 6 ಮಂದಿ ಸಾವು
ಸೆಕ್ಸ್ ಹಗರಣದಲ್ಲಿ ತಾಯಿ ಜೈಲು ಪಾಲು:
ಬಂಧಿತ ಮಹಿಳೆ ಜೋಯಾಳ ಕುಟುಂಬಸ್ಥರು ಸಹ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಕೆಯ ತಾಯಿ ಕಳೆದ ವರ್ಷ ಲೈಂಗಿಕ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಳು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾಳೆ. ಆಕೆಯ ತಂದೆ ಡ್ರಗ್ಸ್ ಸರಬರಾಜು ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ. ಜೋಯಾ ಪ್ರಭಾವಿ ಆಗಿದ್ದರಿಂದ ಸದಾ ಆಕೆ ಜೊತೆಯಲ್ಲಿ 4-5 ಗನ್ ಮ್ಯಾನ್‌ಗಳ ಭದ್ರತೆ ಇರುತ್ತಿತ್ತು ಎಂದು ತಿಳಿದುಬಂದಿದೆ.