ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ- ಮೃತನ ಕುಟುಂಬ, ಗಾಯಾಳುಗಳಿಗೆ ಪರಿಹಾರ

Public TV
1 Min Read
DELHI AIRPORT 1

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ (Delhi Airport Terminal-1) ನಡೆದ ಛಾವಣಿ ಕುಸಿತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 20 ಲಕ್ಷ ರೂ. ಅಲ್ಲದೇ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೊಷಿಸಿದರು.

ನಡೆದಿದ್ದೇನು..?: ರಾಷ್ಟ್ರ ರಾಜಧಾನಿ ದೇಹಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಇಂದು ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1 ರಲ್ಲಿ ಛಾವಣಿ ಕುಸಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಯಿತು. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

ಪ್ರಕರಣದ ಕುರಿತು ತನಿಖೆ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಒಂದರಲ್ಲಿ ಸಂಭವಿಸಿದ ಅವಘಡದ ತನಿಖೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯವು ತಂಡವನ್ನು ರಚಿಸಿದೆ. ಇಂದು ಬೆಳಗ್ಗೆ ಸಂಭವಿಸಿದ ಘಟನೆ ಬಗ್ಗೆ ಸ್ವತಃ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಣ್ಣಿಟ್ಟಿದ್ದಾರೆ. ಮೇಲ್ಛಾವಣಿ ಕುಸಿದು ಕೆಲವು ಕಾರುಗಳಿಗೂ ಹಾನಿಯಾಗಿದೆ.

28 ವಿಮಾನಗಳ ಸಂಚಾರ ರದ್ದು: ಘಟನೆಯಿಂದಾಗಿ ದೆಹಲಿಯ ಟರ್ಮಿನಲ್ ಒಂದರ 28 ವಿಮಾನಗಳ ಸಂಚಾರ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಟರ್ಮಿನಲ್- 2 ಮತ್ತು 3 ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿಕೆಯಾಗಿದೆ.

ಕುಸಿದಿರುವ ಛಾವಣಿ ಭಾಗವನ್ನು 2009 ರಲ್ಲಿ ನಿರ್ಮಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ನವೀಕರಣ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ನವೀಕರಣಗೊಂಡ ಟರ್ಮಿನಲ್ ಉದ್ಘಾಟಿಸಿದ್ದರು. ಇದಾದ ಮೂರೇ ತಿಂಗಳಿಗೆ ಮೊದಲ ಮಳೆಗೆ ಛಾವಣಿ ಕುಸಿದು ಬಿದ್ದಿದೆ.

Share This Article