ನವದೆಹಲಿ: ಮೂವರು ಮುಗ್ಧ ಹೆಣ್ಣು ಮಕ್ಕಳು 8 ದಿನಗಳಿಂದ ಆಹಾರವಿಲ್ಲದೇ ಮೃತಪಟ್ಟ ದಾರುಣ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಮಕ್ಕಳು 8, 4 ಹಾಗೂ ಎರಡು ವರ್ಷದವರಾಗಿದ್ದಾರೆ. ಮಕ್ಕಳು ಹೇಗೆ ಸಾವನ್ನಪ್ಪಿವೆ ಅಂತ ಪೊಲೀಸರು ಕೇಳಿದಾಗ `ನನಗೆ ಆಹಾರ ನೀಡಿ’ ಅಂತ ಮಕ್ಕಳ ತಾಯಿ ಹೇಳಿ ಕುಸಿದು ಬಿದ್ದಿದ್ದಾರೆ.
Advertisement
ಮಂಗಳವಾರ ಬೆಳಗ್ಗೆ ತಾಯಿ ಮೂವರು ಮಕ್ಕಳೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳ ತಾಯಿಯನ್ನು ಪ್ರಶ್ನಿಸಿದ್ದಾರೆ. ಮಕ್ಕಳು ಹೇಗೆ ಮೃತಪಟ್ಟಿದ್ದಾರೆ ಅಂದಾಗ `ನನಗೆ ಆಹಾರ ನೀಡಿ’ ಅಂತ ಹೇಳಿ ತಾಯಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.
Advertisement
ಕಳೆದ 8 ದಿನಗಳಿಂದ ಮಕ್ಕಳು ಆಹಾರವನ್ನೇ ಸೇವಿಸಿಲ್ಲ. ಈ ವಿಚಾರ ತಿಳಿದ ವೈದ್ಯರೇ ಒಂದು ಬಾರಿ ಶಾಕ್ ಆಗಿದ್ದಾರೆ. ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ, ಅವುಗಳ ಹೊಟ್ಟೆ ಸಂಪೂರ್ಣವಾಗಿ ಖಾಲಿಯಾಗಿದ್ದು, ಅಪೌಷ್ಟಿಕತೆಯಿಂದ ಕೂಡಿತ್ತು ಅಂತ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅಮಿತ್ ಸೆಕ್ಸೇನಾ ತಿಳಿಸಿದ್ದಾರೆ.
Advertisement
15 ವರ್ಷದ ನನ್ನ ವೈದ್ಯಕೀಯ ಜೀವನದಲ್ಲಿ ಇಂತಹ ಪ್ರಕರಣವನ್ನು ನಾನು ಕಂಡಿಲ್ಲ ಅಂತ ಆಸ್ಪತ್ರೆಯ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶದ ಆದಾಯದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಧಾನಿಯಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ ಅಂದ್ರೆ ಅಚ್ಚರಿಯ ಸಂಗತಿಯಾಗಿದೆ.
Advertisement
ಬಂಗಾಳದ 5 ಮಂದಿಯ ಕುಟುಂಬ ಶನಿವಾರ ಪೂರ್ವ ದೆಹಲಿಯ ಮಂಡವಳಿಗೆ ತೆರಳಿತ್ತು. ಮಕ್ಕಳ ತಂದೆಯ ಗೆಳೆಯನ ಮನೆಗೆ ಬಂದಿದ್ದರು ಅಂತ ನೆರೆಮನೆಯವರು ತಿಳಿಸಿದ್ದಾರೆ. ಮಕ್ಕಳ ತಂದೆ ಕೈಗಾಡಿ ಎಳೆಯುತ್ತಿದ್ದು, ಘಟನೆಯ ಬಳಿಕ ನಾಪತ್ತೆಯಾಗಿದ್ದಾರೆ. ಆತ ಕೆಲಸ ಹುಡುಕಿಕೊಂಡು ಹೋಗಿದ್ದು, ಒಂದೆರೆಡು ದಿನಗಳಲ್ಲಿ ಹಿಂದಿರುಗಿ ಬರಬಹುದು. ಯಾಕಂದ್ರೆ ಅವರ ಕೈ ಗಾಡಿ ಇತ್ತೀಚೆಗೆ ಕಳೆದುಹೋಗಿದ್ದು, ಹೀಗಾಗಿ ಅವರು ಬೇರೆ ಕೆಲಸ ಹುಡುಕುತ್ತಿದ್ದಾರೆ ಅಂತ ನೆರೆಮನೆಯವರು ಹೇಳುತ್ತಿದ್ದಾರೆ. ಸದ್ಯ ಮೂವರು ಮಕ್ಕಳನ್ನು ಕಳೆದುಕೊಂಡಿರುವ ತಾಯಿ ಮಾತ್ರ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬ ಕಳೆದ ಮೂರು ದಿನಗಳಿಂದ ವಾಸಿಸುತ್ತಿದ್ದ ಕೊಠಡಿಯನ್ನು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದಾಗ ಕೆಲ ಔಷಧಿಗಳ ಬಾಟಲ್ ಗಳು ಮತ್ತು ಬೇರೆ ಸ್ವಲ್ಪ ಮಾತ್ರೆಗಳು ಇರುವುದು ಬೆಳಕಿಗೆ ಬಂದಿದೆ. ಮೂವರಲ್ಲಿ ಇಬ್ಬರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದರಲ್ಲಿ ಯಾರು ಅನಾರೋಗ್ಯದಲ್ಲಿದ್ದರು ಎಂಬುದಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಶಾಲೆಗೆ ಹೋಗುತ್ತಿದ್ದವರಲ್ಲಿ ಇಬ್ಬರು ಶಾಲೆಯಲ್ಲಿನ ಬಿಸಿಯೂಟ ತಿಂದು ಅನಾರೋಗ್ಯಕ್ಕೀಡಾಗಿದ್ದಾರೆ ಅಂತ ತಿಳಿಸಿದ್ದಾರೆ.
ಘಟನೆಯ ಬಳಿಕ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಕುಟುಂಬಕ್ಕೆ ಭೇಟಿ ನೀಡಿ ಆಡಳಿತ ಪಕ್ಷ ಆಮ್ ಆದ್ಮಿ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ದೊಡ್ಡ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಚಾರದಲ್ಲಿ ರಾಜಕೀಯವನ್ನು ತರಲು ನಾನು ಇಷ್ಟಪಡುವುದಿಲ್ಲ. ಯಾಕಂದ್ರೆ ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ. ಇಂತಹ ಆಹಾರವನ್ನು ನಾಗರಿಕರಿಗೆ ನೀಡುವುದು ದೆಹಲಿ ಸರ್ಕಾರ ಜವಾಬ್ದಾರಿಯಾಗಿದೆ ಅಂತ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.
ಕೆಲ ವರ್ಷದ ಹಿಂದೆ ಮನೆ ಬಾಗಿಲಿಗೆ ಹೋಗಿ ಪಡಿತರ ನೀಡಲಾಗುತ್ತಿತ್ತು, ಆದ್ರೆ ಇದೀಗ ಅದು ನಿಂತಿದೆ. ಇದನ್ನು ನಿಲ್ಲಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಅಂತ ಆಪ್ ಮುಖಂಡ ಸಂಜಯ್ ಶರ್ಮ ಆಗ್ರಹಿಸಿದ್ದಾರೆ.