ಮುಂಬೈ: ಸೊಸೆ ಚೆನ್ನಾಗಿ ಅಡುಗೆ ಮಾಡಿ ಹಾಕಿಲ್ಲವೆಂದು ಸಿಟ್ಟುಗೊಂಡ ತಂದೆಯೊಬ್ಬ ತನ್ನ ಮಗನನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
19 ವರ್ಷದ ಸೊಸೆ ರೇಖಾ ತರಕಾರಿ ಸಾರು ಚೆನ್ನಾಗಿ ಮಾಡಲಿಲ್ಲವೆಂದು ಸಿಟ್ಟಿಗೆದ್ದ 50 ವರ್ಷದ ಶಾಂತರಾಮ್ ಉಜ್ಜೈಂಕಾರ್ ತನ್ನ ಮಗ 24 ವರ್ಷದ ಕೃಷ್ಣನನ್ನೇ ಕೊಲೆಗೈದಿದ್ದಾನೆ.
ಏನಿದು ಪ್ರಕರಣ?: ಸೊಸೆ ರೇಖಾ ತರಕಾರಿ ಸಾರು ಮಾಡಿದ್ದರು. ಮಾವ ಊಟಕ್ಕೆಂದು ಬಂದು ಕುಳಿತಿದ್ದ ವೇಳೆ ಸೊಸೆ ಊಟ ಬಡಿಸಿದಳು. ಆದ್ರೆ ಸಾರು ಚೆನ್ನಾಗಿಲ್ಲವೆಂದು ಸಿಟ್ಟಿಗೆದ್ದ ಮಾವ ಅನ್ನದ ಬಟ್ಟಲನ್ನೇ ಹೊರಗೆ ಬಿಸಾಡಿದ್ದಾನೆ.
ಮಾವನ ವರ್ತನೆಯಿಂದ ರೇಖಾ ಸಹಜವಾಗಿಯೇ ಬೇಸರಗೊಂಡಿದ್ದರು. ಮಾವ ಸಿಟ್ಟುಗೊಂಡ ವೇಳೆಯಲ್ಲಿ ರೇಖಾ ಪತಿ ಮನೆಯಲ್ಲಿರಲಿಲ್ಲ. ಕೆಲಸದ ನಿಮಿತ್ತ ಕೃಷ್ಣ ಹೊರಗಡೆ ತೆರಳಿದ್ದ. ಪತಿ ಮನೆಗೆ ಬಂದ ಕೂಡಲೇ ಮಾವ ಸಿಟ್ಟುಗೊಂಡಿರೋ ವಿಚಾರವನ್ನು ತಿಳಿಸಿದ್ದಾಳೆ. ಇದನ್ನು ಕೇಳಿದ ಪತಿ ಕೃಷ್ಣ, ರೇಖಾಳನ್ನೇ ನಿಂದಿಸಿ ಊಟ ಮಾಡಿ ವಾಕ್ ಮಾಡಲೆಂದು ಹೊರಗಡೆ ತೆರಳಿದ್ದಾನೆ.
ಪತಿ ಹೊರಗಡೆ ಹೀಗುತ್ತಿದ್ದಂತೆಯೇ ಮಾವ ಮತ್ತೆ ಸೊಸೆ ರೇಖಾ ಜೊತೆ ಜಗಳವಾಡಿದ್ದಾನೆ. ಅಲ್ಲದೇ ಸೊಸೆಯ ಹೊಟ್ಟೆಗೆ ಹೊಡೆದಿದ್ದಾನೆ. ಇದನ್ನರಿತ ಪತಿ ಮನೆಗೆ ವಾಪಸ್ಸಾಗಿದ್ದಾನೆ. ಅಲ್ಲದೇ ತನ್ನ ಪತ್ನಿಯ ಮೇಲೆ ಕೈ ಮಾಡುತ್ತಿರುವ ತಂದೆಯ ವರ್ತನೆಯ ಬಗ್ಗೆ ಪ್ರಶ್ನಿಸಿದ್ದಾನೆ.
ಪತ್ನಿ ಮೇಲೆ ಕೈ ಮಾಡದಂತೆ ತಂದೆಗೆ ಕೃಷ್ಣ ಹೇಳಿದ್ದಾನೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ತಂದೆ ಮಗನ ಮೇಲೆ ಹಲ್ಲೆಗೈದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.