ನವದೆಹಲಿ: 2024ರಲ್ಲಿ ಆಸ್ತಮಾ, ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ಷಯ ಸೇರಿದಂತೆ ವಿವಿಧ ಉಸಿರಾಟ ಸಂಬಂಧಿತ ಕಾಯಿಲೆಗಳಿಂದ ದೆಹಲಿಯಲ್ಲಿ 9,000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಯೊಂದು ಹೊರಬಿದ್ದಿದೆ.
2024ರ ವರ್ಷದಲ್ಲಿ ಉಸಿರಾಟ ಕಾಯಿಲೆಗಳಿಂದ ದೆಹಲಿಯಲ್ಲಿ 9,211 ಸಾವುಗಳು ದಾಖಲಾಗಿವೆ. ಇದು 2023 ರಲ್ಲಿ 8,801 ರಷ್ಟಿತ್ತು ಎಂದು ದೆಹಲಿ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ-ಅಂಶಗಳು ಹೇಳಿವೆ ಎಂದು ವರದಿಯಾಗಿದೆ.
ಆಸ್ತಮಾ, ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ಷಯರೋಗಗಳಿಂದ ಉಸಿರಾಟ ಸಂಬಂಧಿಯ ಸಮಸ್ಯೆಗಳು ಉಂಟಾಗಿ ಸಾವುಗಳು ಸಂಭವಿಸಿವೆ. ಆದ್ರೆ ಇದೊಂದೇ ಅಲ್ಲ ರಕ್ತಪರಿಚಲನಾ ಕಾಯಿಲೆಗಳು 2024ರ ವರ್ಷದಲ್ಲಿ ಆದ ಸಾವುಗಳಿಗೆ ಒಂದು ಪ್ರಮುಖ ಕಾರಣ. ಇದರೊಂದಿಗೆ ಸಾಂಕ್ರಾಮಿಕ ಮತ್ತು ಪರಾವಲಂಬಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ ಎನ್ನುತ್ತಿವೆ ವರದಿಗಳು.
ಈ ಕಾಯಿಲೆಗಳು ಹೊರತುಪಡಿಸಿದ್ರೆ ದೆಹಲಿಯಲ್ಲಿ 2024ರಲ್ಲಿ ಒಟ್ಟು 1,39,480 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 85,391 ಪುರುಷರು, 54,051 ಮಹಿಳೆಯರು ಮತ್ತು 38 ತೃತೀಯಲಿಂಗಿಗಳಿದ್ದಾರೆ. 90,883 ಸಾವುಗಳು ವೈದ್ಯಕೀಯವಾಗಿ ಪ್ರಮಾಣೀಕರಿಸಲ್ಪಟ್ಟಿವೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತಿವೆ ಎನ್ನಲಾಗಿದೆ.


