Connect with us

Latest

ಎರಡೆಲೆ ಚಿಹ್ನೆಗಾಗಿ ಕೋಟಿ ಡೀಲ್ ಮಾಡ್ದೋನು ಬೆಂಗ್ಳೂರು ಹುಡ್ಗ – ದಕ್ಷಿಣ ಭಾರತದ ರಾಜಕಾರಣಿಗಳೆಲ್ಲಾ ಈತನ ಸಂಬಂಧಿಕರಂತೆ!

Published

on

ಮುರುಳೀಧರ್ ಹೆಚ್.ಸಿ.

ನವದೆಹಲಿ: ಎಐಎಡಿಎಂಕೆಯ ಎರಡೆಲೆ ಚಿಹ್ನೆಗಾಗಿ ಡೀಲ್ ಕುದುರಿಸೋಕೆ ಮುಂದಾದವನು ಬೆಂಗಳೂರಿನ ಯುವಕ. ಮೊದಲಿನಿಂದಲೂ ಈತನಿಗೆ ಹಣದ ಹುಚ್ಚು ವ್ಯಾಮೋಹ, ಕಾರುಗಳೆಂದರೆ ಶೋಕಿ. ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಈತ ಮೂಲತಃ ತಮಿಳುನಾಡಿನವನು. ಆದರೆ ಈತ ನೆಲೆಸಿರೋದು ಮಾತ್ರ ಬೆಂಗಳೂರಿನಲ್ಲಿ.

ಘಟನೆ ಏನು?: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದಿನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರನ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.30 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗಿದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿ ಹಾಕಿದ್ದು, ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡಬ್ಲ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.

ತಮಿಳುನಾಡು ಅಂದ್ರೆ ಜಯಲಲಿತಾ, ಜಯಲಲಿತಾ ಅಂದ್ರೆ ತಮಿಳುನಾಡು ಅಂತಿತ್ತು. ಯಾವಾಗ ಜಯಲಲಿತಾ ಸಾವನ್ನಪ್ಪಿದರೋ ಬಳಿಕ ಇಡೀ ತಮಿಳುನಾಡಿನ ರಾಜಕೀಯವೇ ಬುಡಮೇಲು ಆಗಿಬಿಟ್ಟಿತ್ತು. ಇನ್ನು ಆರ್‍ಕೆ ನಗರ ಉಪಚುನಾವಣೆಗೆ ಎರಡೆಲೆಗಾಗಿ ಬಡಿದಾಡಿಕೊಂಡ ಎರಡು ಬಣ ಬೇರೆ ಬೇರೆ ಚಿಹ್ನೆಯನ್ನು ಇಟ್ಟುಕೊಂಡು ಚುನಾವಣೆಗೆ ಇಳಿದ್ರು. ಆದರೆ ಭ್ರಷ್ಟಚಾರದ ಕಾರಣದಿಂದ ಉಪಚುನಾವಣೆಯೇ ಕ್ಯಾನ್ಸಲ್ ಆಗಿಬಿಟ್ಟಿತ್ತು.

ಎರಡೆಲೆಗೆ 50 ಕೋಟಿ..!: ಇಷ್ಟೆಲ್ಲ ಆದ್ಮೇಲೆ ಎರಡೆಲೆ ಚಿಹ್ನೆಯನ್ನು ಪಡೆದುಕೊಳ್ಳೊದೇ ಪ್ರತಿಷ್ಟೆಯನ್ನಾಗಿ ಮಾಡಿಕೊಂಡ ಎರಡು ಬಣಗಳಲ್ಲಿ ದಿನಕರನ್ ಒಂದು ಹೆಜ್ಜೆ ಮುಂದೆಯೇ ಹೋದಂತಿದೆ… ಎರಡೆಲೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ 50 ಕೋಟಿ ಡೀಲ್ ಮಾತನಾಡೋದಕ್ಕೆ ಹೋಗಿ 1 ಕೋಟಿ ಹಣವನ್ನು ಕೊಡೋದಕ್ಕೆ ಡೀಲ್ ಮಾಡಿಕೊಂಡಿದ್ದರಂತೆ. ಈ ವಿಚಾರ ತಿಳಿದಿದ್ದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ರು ಸುಖೇಶ್ ಚಂದ್ರಶೇಖರನ್‍ನನ್ನು ಬಂಧಿಸಿದ್ದಾರೆ.

ದಕ್ಷಿಣದ ರಾಜಕರಾಣಿಗಳೆಲ್ಲಾ ಸಂಬಂಧಿಕರೇ!: ಹಣ ಕೊಡೋದಕ್ಕೆ ಹೋಗಿ ಪೊಲೀಸ್ರ ಕೈಯಲ್ಲಿ ತಗ್ಲಾಕೊಂಡ ಸುಖೇಶ್ ಚಂದ್ರಶೇಖರನ್ ಮೂಲ ಕೆದುಕುತ್ತಾ ಹೋದ್ರೆ ಒಂದು ಫಿಲಂ ಸ್ಟೋರಿಯನ್ನೇ ಮಾಡ್ಬಹುದು. ಚೆನ್ನೈ ಮೂಲದ ಸುಕೇಶ್ ಬೆಂಗಳೂರಿನಲ್ಲೇ ನೆಲೆಸಿ ಸಿಕ್ಕ ಸಿಕ್ಕ ಜನರಿಗೆಲ್ಲಾ ಮೋಸ ಮಾಡಿಕೊಂಡೇ ಜೀವನ ಮಾಡ್ತಾ ಇದ್ದ. ರಾಜಕಾರಣಿಗಳ ಸಂಬಂಧಿ ಅಂತ ಹೇಳಿಕೊಳ್ತಾ ಇದ್ದ ಸುಖೇಶ್, ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ನಾನು ಕುಮಾರಸ್ವಾಮಿ ಸಂಬಂಧಿ ಎಂದು ಬಾಲಾಜಿ ಎಂಬುವವರಿಗೆ ಬರೋಬರಿ 1 ಕೋಟಿಯಷ್ಟು ಉಂಡೆ ನಾಮ ತೀಡಿ ಎಸ್ಕೇಪ್ ಆಗಿದ್ನಂತೆ.

2009ರಲ್ಲಿಯೇ ಕೋರಮಂಗಲ ಪೊಲೀಸ್ರು 10 ಲಕ್ಷ ಚೀಟಿಂಗ್ ಕೇಸ್‍ನಲ್ಲಿ ಅರೆಸ್ಟ್ ಆಗಿದ್ದ ಸುಖೇಶ್ ಮೋಸ ಮಡೋದಕ್ಕೆ ಶುರು ಮಾಡಿದ್ದೇ ತನ್ನ 17ನೇ ವಯಸ್ಸಿನಲ್ಲಿ. ಟೀನೇಜ್‍ನಲ್ಲಿ ನೋಡಿದ್ದೆಲ್ಲಾ ಬೇಕು ಅಂದುಕೊಳ್ಳುವ ವಯಸ್ಸಿನ ಹುಡ್ಗ ಸಿಕ್ಕ ಸಿಕ್ಕವರನ್ನೆಲ್ಲಾ ಮೋಸ ಮಾಡಬಹುದು ಅಂತ ಸುಲಭವಾಗಿ ತಿಳಿದುಕೊಂಡುಬಿಟ್ಟಿದ್ದ.

ಜಯಲಲಿತಾ ಸೋದರನ ಮಗ ಅಂತೆ..!, ಕರುಣಾನಿಧಿಯ ಮೊಮ್ಮಗ..!: ಹಾವು ಮುಂಗುಸಿಯಂತೆ ಬಡಿದಾಡಿಕೊಳ್ತಾ ಇದ್ದ ಜಯಲಲಿತಾ ಮತ್ತು ಕರುಣಾನಿಧಿ ಸಂಬಂಧಿ ಅಂತ ಜನರಿಗೆ ಮೋಸ ಮಾಡ್ತಾ ಇದ್ದ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯಲ್ಲಿ ಹೇಳ್ತಾ ಇದ್ದ ಸುಖೇಶ್ ಚಂದ್ರಶೇಖರನ್ ತಮಿಳುನಾಡಿನಲ್ಲಿಯೇ 100 ಕೋಟಿಗೂ ಮೀರಿದ ವಂಚನೆಯನ್ನು ಮಾಡಿದ್ದಾನೆ. ಪೊಲೀಸ್ರ ಕೈಯಲ್ಲಿ ಸಾಕಷ್ಟು ಬಾರಿ ಸಿಕ್ಕಿಬಿದ್ದಿದ್ದಾನೆ.

ಕಾರು ಅಂದ್ರೆ ಮೋಜು..!, ಹುಡ್ಗೀರು ಅಂದ್ರೆ ಇವನದ್ದೇ ಕಾರುಬಾರು..!: ತನ್ನ 17ನೇ ವಯಸ್ಸಿನಲ್ಲಿ ಸಿಕ್ಕ ಸಿಕ್ಕವರೆನ್ನೆಲ್ಲಾ ಮೋಸ ಮಾಡಿಕೊಂಡು ಜೀವನ ಮಾಡೋದಕ್ಕೆ ಪ್ರಮುಖ ಕಾರಣವೇ ಅವನ ವಿಲಾಸಿ ಜೀವನ. ಕಾರುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಬೆಳಸಿಕೊಂಡಿದ್ದ ಸುಖೇಶ್ ಇಷ್ಟೆಲ್ಲಾ ಮೋಸ ಮಾಡ್ತಾ ಇದ್ದಿದ್ದೇ ತನ್ನ ವಿಲಾಸಿ ಜೀವನಕ್ಕಾಗಿ. ಬಿಎಂಡಬ್ಲೂ, ಆಡಿ ಮುಂತಾದ ಕೋಟಿ ಕೋಟಿ ಮೌಲ್ಯದ ಕಾರುಗಳನ್ನು ಖರೀದಿ ಮಾಡಿ ಮಜಾ ಮಾಡ್ತಿದ್ದ. ಇನ್ನು ಹುಡ್ಗೀರ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ಮಾಡಿಕೊಂಡಿದ್ದವನಿಗೆ ಮಾಡಲ್‍ಗಳು ಅಂದ್ರೆ ಭಯಂಕರ ಹುಚ್ಚು.

ಬಾಡಿಗಾರ್ಡ್ಸ್ ಕೊಟ್ಟು ಕೊಡೋದು ಹಣ ಪೀಕೋದು…!: ಬಾಡಿಗಾರ್ಡ್ಸ ಗಳನ್ನು ಕೊಡೋದಾಗಿ ಹೇಳಿ ರಾಜಕಾರಣಿಗಳ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದ. ಹಾಗೆಯೇ ಇಂಟೀರಿಯರ್ ಡೆಕೊರೇಷನ್ ಮಾಡಿಕೊಡ್ತೀನಿ ಎಂದು ಮನೆಯ ಒಳಗೆ ಎಂಟ್ರಿ ಕೊಡುವ ಈತ ರಾಜಕಾರಣಿಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರ ಡೀಲ್‍ಗಳು ಅವರ ಕೆಲಸವೆಲ್ಲವನ್ನೂ ಮಾಡಿಕೊಡ್ತಾನೆ. ಇದೇ ರೀತಿ ದಿನಕರನ್ ಪರಿಚಯ ಮಾಡಿಕೊಂಡು ಡೀಲ್ ಮಾಡಿದ್ನಂತೆ ಸುಖೇಶ್.

10 ಪರ್ಸೆಂಟ್ ಡೀಲ್..!: ಎರಡೆಲೆಗಾಗಿ 50 ಕೋಟಿ ಡೀಲ್ ಮಾಡೋದಕ್ಕೆ ಬಂದು ಪೊಲೀಸ್ರ ಕೈಗೆ ಸಿಕ್ಕಿಬಿದ್ದಿರೋ ಸುಖೇಶ್ ಚಂದ್ರಶೇಖರನ್ ದಿನಕರ್ ಜೊತೆಗೆ 10 ಪರ್ಸೆಂಟ್ ಡೀಲ್ ಮಾತನಾಡಿಕೊಂಡಿದ್ದು, ಅದನ್ನು ಕುದುರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ದಿನಕರನ್ ಕೂಡ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

 

Click to comment

Leave a Reply

Your email address will not be published. Required fields are marked *