ಕರ್ನಾಟಕಕ್ಕೆ ಕಂಟಕ ತರುತ್ತಾ ದೆಹಲಿ ಸಭೆ? ಯಾವ ಜಿಲ್ಲೆಯಿಂದ ಎಷ್ಟು ಮಂದಿ ಭಾಗಿ?

Public TV
2 Min Read
Nizamuddin A

– ಜಮಾತ್ ಸಭೆಯಲ್ಲಿ ರಾಜ್ಯದ 391 ಜನರು ಭಾಗಿ
– ಎಲ್ಲರಿಗೂ ಹೋಮ್ ಕ್ವಾರಂಟೈನ್ ಎಂದ ಬೊಮ್ಮಾಯಿ

ಬೆಂಗಳೂರು: ದೆಹಲಿಯ ಮರ್ಕಜ್ ಮಸೀದಿ ಕರ್ನಾಟಕಕ್ಕೂ ಮುಳುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಮೌಲ್ವಿಗಳು ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದಾರೆ.

ಪಬ್ಲಿಕ್ ಟಿವಿಗೆ ಲಭ್ಯವಾದ ಪ್ರಾಥಮಿಕ ಮಾಹಿತಿ ಪ್ರಕಾರ, ರಾಜ್ಯದಿಂದ ದೆಹಲಿಗೆ ಹೋಗಿ ಬಂದವರ ಸಂಖ್ಯೆ 430 ದಾಟುತ್ತದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಸವರಾಜ ಬೊಮ್ಮಾಯಿ ಅವರು, ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ರಾಜ್ಯದ ಮೌಲ್ವಿಗಳ ಸಂಖ್ಯೆ ಏರಿಕೆಯಾಗಿದೆ. ಕರ್ನಾಟಕದ 391 ಮಂದಿ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲ 391 ಜನರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕೆಲವರು ತಮ್ಮ ನಿವಾಸದಲ್ಲಿ ಇರೇ ಬೇರೆ ಬೇರೆ ಕಡೆ ತೆರಳಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಇನ್ನು ಕೆಲವರು ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ತೆರಳಿದ್ದು ಕರ್ನಾಟಕಕ್ಕೆ ತಲುಪಿಲ್ಲ. ಅವರ ಬಗ್ಗೆಯೂ ಶೋಧ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Nizamuddin Aulia Dargah

ಯಾರ್ಯಾರು ದೆಹಲಿ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದೀರೋ ಅವರೆಲ್ಲಾ ಸ್ವಯಂಪ್ರೇರಿತವಾಗಿ ಮುಂದೆ ಬಂದು ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಜಮಾತ್‍ಗೆ ಹೋಗಿ ಬಂದು ರಾಜ್ಯದ ವಿವಿಧೆಡೆ ನೆಲೆಸಿರುವ 50 ವಿದೇಶಿಗರನ್ನು ಕ್ವಾರಂಟೈನ್ ಮಾಡಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ

ಯಾವ ಜಿಲ್ಲೆಯಿಂದ ಎಷ್ಟೆಷ್ಟು ಮಂದಿ?
ಬೆಂಗಳೂರಿನಿಂದ 60 ಮಂದಿ ದೆಹಲಿಯಲ್ಲಿ ನಡೆದಿದ್ದ ತಬ್ಲಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ರು. ಆದರೆ ಈವರೆಗೂ 9 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಭಾಗಿಯಾಗಿದ್ದ 70 ಮಂದಿ ಪತ್ತೆಯಾಗಿದ್ದಾರೆ. ಮೈಸೂರಿನಿಂದ ಕಾರ್ಯಕ್ರಮಕ್ಕೆ ಹಾಜರಾಗಿದ್ದ 63 ಮಂದಿ ಪೈಕಿ 43 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೀದರ್ ಜಿಲ್ಲೆಯ 26 ಹಾಗೂ ಬಾಗಲಕೋಟೆ ಜಿಲ್ಲೆಯ 21 ಜನರು ಹಾಜರಾಗಿದ್ದರು.

ಕಲಬುರಗಿ ಜಿಲ್ಲೆಯಿಂದ ದೆಹಲಿ ಸಭೆಗೆ ಹಾಜರಾಗಿದ್ದ 26 ಜನರ ಪೈಕಿ 14 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ 13 ಜನರು, ಚಿಕ್ಕಬಳ್ಳಾಪುರದ 17 ಮಂದಿ, ಚಿತ್ರದುರ್ಗದ 9 ಜನರು, ದಾವಣಗೆರೆಯ ಇಬ್ಬರು, ಧಾರವಾಡದ 15 ಮಂದಿ ಹಾಗೂ ಕಲಬುರಗಿಯ 19 ಜನರು ಜಮಾತ್ ಸಭೆಗೆ ಹೋಗಿದ್ದರು.

ಕೊಪ್ಪಳ ಜಿಲ್ಲೆಯ 14 ಜನ, ಉತ್ತರ ಕನ್ನಡ ನಾಲ್ವರು ಜಮಾತ್ ಸಭೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡದ 28 ಜನರು ಭಾಗವಹಿಸಿದ್ದು, 21 ಜನರು ಮಾತ್ರ ಪತ್ತೆಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಐವರು, ಕೋಲಾರದ 8 ಮಂದಿ, ಗದಗ ಜಿಲ್ಲೆಯ 6 ಜನರು, ತುಮಕೂರು ಜಿಲ್ಲೆಯ 11 ಮಂದಿ ಹಾಜರಾಗಿದ್ದರು. ಕೊಡಗು ಜಿಲ್ಲೆಯ 11 ಜನರು ಭಾಗವಹಿಸಿದ್ದು, ಕುಶಾಲನಗರದ ಯಾರು ವಾಪಸ್ ಆಗಿಲ್ಲ. ಉಡುಪಿಯಿಂದ 16 ಜನರು ಭಾಗವಹಿಸಿದ್ದರೆ, ಚಾಮರಾಜನಗರ ಜಿಲ್ಲೆಯ 14 ಜನರ ಪೈಕಿ 4 ಪತ್ತೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *