ನವದೆಹಲಿ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಮಹಿಳೆಯರಿಗೆ ದೆಹಲಿ ಸರ್ಕಾರ ಬಂಪರ್ ಘೋಷಣೆ ಪ್ರಕಟಿಸಿದೆ. ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮಹತ್ವದ ನಿರ್ಧಾರವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸಂಚಾರ ಮಾಡುವ ಮಹಿಳೆಯರಿಗೆ ಸುರಕ್ಷಿತ ಪ್ರಯಾಣದ ಅನುಭವ ಸಿಗಲಿ ಎಂದು ದೆಹಲಿಯ ಮೆಟ್ರೋ ಮತ್ತು ಬಸ್ ಸಂಚಾರವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Advertisement
“ದೆಹಲಿಯ ಡಿಟಿಸಿ ಬಸ್, ಕ್ಲಸ್ಟರ್ ಬಸ್‍ಗಳು ಮತ್ತು ಮೆಟ್ರೋ ರೈಲುಗಳಲ್ಲಿ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ. ಇದರಿಂದ ಅವರು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು. ಹೆಚ್ಚಿನ ಬೆಲೆಯಿದೆ ಎಂಬ ಕಾರಣಕ್ಕೆ ಕೆಲ ಮಹಿಳೆಯರು ಕೆಲವು ಸಾರಿಗೆ ವಿಧಾನಗಳನ್ನು ಬಳಸುತ್ತಿಲ್ಲ. ಈ ಉಚಿತ ಯೋಜನೆಯಿಂದ ಅಂತಹ ಮಹಿಳೆಯರಿಗೆ ಅನುಕೂಲವಾಗುತ್ತೆದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Advertisement
Advertisement
ಇದರಲ್ಲಿ ಯಾವುದೇ ತರಹದ ಸಹಾಯಧನವನ್ನು ವಿಧಿಸಿಲ್ಲ. ಈ ಉಚಿತ ಯೋಜನೆ ಐಚ್ಛಿಕವಾಗಿದ್ದು ನಾವು ಟಿಕೆಟ್ ಪಡೆದು ಸಂಚಾರ ಮಾಡುತ್ತೇವೆ ಎಂದು ಮಹಿಳೆಯರು ನಿರ್ಧರಿಸಿದರೆ ಹಣವನ್ನು ಪಾವತಿಸಿ ಸಂಚರಿಸಬಹುದು ಎಂದು ತಿಳಿಸಿದರು.
Advertisement
ಈ ಯೋಜನೆಯನ್ನು ಈಗ ಪ್ರಸ್ತಾಪ ಮಾಡಿದ್ದೇವೆ ಹೊರತು ಆರಂಭಿಸಿಲ್ಲ. ಈ ಯೋಜನೆಯ ಸಂಬಂಧ ಡಿಟಿಸಿ ಮತ್ತು ಮೆಟ್ರೋ ಅಧಿಕಾರಿಗಳಿಗೆ ದೀರ್ಘವಾದ ಪ್ರಸ್ತಾವನೆ ಸಿದ್ಧಪಡಿಸಲು ಒಂದು ವಾರ ಸಮಯ ನೀಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪ್ರಸ್ತಾವನೆಗಳನ್ನು ಅಧ್ಯಯನ ಮಾಡಿದ ಬಳಿಕ 2-3 ತಿಂಗಳಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಈ ಸಂಬಂಧ ಜನರಿಂದಲೂ ನಾವು ಸಲಹೆಗಳನ್ನು ಕೇಳಿದ್ದೇವೆ ಎಂದು ತಿಳಿಸಿದರು.