45,000 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಇರಿದು ಕೊಂದ್ರು!

Public TV
1 Min Read
POLICE

ನವದೆಹಲಿ: ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ದೆಹಲಿಯ ನರೇಲಾದಲ್ಲಿ ನಡೆದಿದೆ.

ಶುಕ್ರವಾರ ಸಂಜೆ ಉತ್ತರ ದೆಹಲಿಯ ನರೇಲಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಯುವಕನನ್ನು ಇರಿದು ಕೊಂದಿದ್ದಾರೆ. ಕೊಲೆಯಾದ ಯುವಕನನ್ನು ಹಿಮಾಂಶು (26) ಎಂದು ಗುರುತಿಸಲಾಗಿದೆ. ಆತ ಕಳೆದ ನಾಲ್ಕು ತಿಂಗಳಿನಿಂದ ತನ್ನ ಸ್ನೇಹಿತ ಸುಮಿತ್ ಕೌಶಿಕ್ ಎಂಬವರ ಜೊತೆ ವಾಸವಾಗಿದ್ದ. ಸಂಜೆ 6:28ಕ್ಕೆ ಪೊಲೀಸರು ಆತನ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯನ್ನು ಸುಮಿತ್ ಕೌಶಿಕ್ ಪ್ರತ್ಯಕ್ಷವಾಗಿ ನೋಡಿದ್ದು, ಆರೋಪಿಗಳು ಸಂಜೆ 6 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿ ಹಿಮಾಂಶು ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿ ರವಿ ಎಂಬಾತ ಸುಮಿತ್ ಕೌಶಿಕ್ ಅವರಿಂದ 45,000 ರೂ. ಸಾಲ ಪಡೆದಿದ್ದ ಮತ್ತು ಅದನ್ನು ಹಿಂದಿರುಗಿಸಲು ವಿಫಲನಾಗಿದ್ದ. ಸಫಿಯಾಬಾದ್‌ನಲ್ಲಿರುವ ರವಿಯ ನಿವಾಸಕ್ಕೆ ಹಿಮಾಂಶು ಭೇಟಿ ನೀಡಿ ಮರುಪಾವತಿಗೆ ಒತ್ತಾಯಿಸಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳಲು ರವಿ ತನ್ನ ಸಹಚರರೊಂದಿಗೆ ಸೇರಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ರವಿ (30), ಸಾಹಿಲ್ (24), ಮತ್ತು ಆಶಿಶ್ (26) ಎಂಬವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅಕ್ಷಯ್ ಖತ್ರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share This Article