ನವದೆಹಲಿ: ಜಾಮೀನು (Bail) ಪಡೆಯಲು ಉದ್ದೇಶಪೂರ್ವಕವಾಗಿ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳುತ್ತಿದ್ದಾರೆ ಎನ್ನುವ ಇಡಿ (ED) ಆರೋಪಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಪರ ವಕೀಲರು ತಿರುಗೇಟು ನೀಡಿದ್ದಾರೆ. ಮಾಧ್ಯಮಗಳಿಗೆ ಸುದ್ದಿಯಾಗಲು ಇಡಿ ಕೇಜ್ರಿವಾಲ್ ಮೇಲೆ ಈ ರೀತಿಯ ಕ್ಷುಲ್ಲಕ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಸುಲಿನ್ ಪಡೆಯಲು ಅನುಮತಿ ನೀಡುವಂತೆ ಕೋರಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಆರೋಪಗಳಗೆ ಕೇಜ್ರಿವಾಲ್ ಪರ ವಕೀಲರು ಉತ್ತರಿಸಿದರು. ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ (Sugar) ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು – ಹಲವು ರಾಷ್ಟ್ರಗಳಿಂದ ಬೇಡಿಕೆ
ಸಕ್ಕರೆ ರಹಿತ ಚಹಾ ಸೇವಿಸುತ್ತೇನೆ ಮತ್ತು ಬಿಳಿ ಅನ್ನದ ಬದಲು ಕಂದು ಬಣ್ಣದ ಅನ್ನವನ್ನು ಸೇವಿಸುತ್ತಿದ್ದಾರೆ ಈ ಎಲ್ಲವನ್ನು ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾಡುತ್ತಿದ್ದಾರೆ. ಅದಾಗ್ಯೂ ಮಾಧ್ಯಮಗಳ ಗಮನ ಸೆಳೆಯಲು ಕ್ಷುಲ್ಲಕ ಆರೋಪ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದಿಸಿದರು. ಇದನ್ನೂ ಓದಿ: ಲವ್ ಜಿಹಾದ್ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್ ಮನವಿ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲರು ವೈದ್ಯರು ಸೂಚಿಸುವ ಡಯೆಟ್‌ಗೂ ಕೇಜ್ರಿವಾಲ್ ಅವರು ಸೇವಿಸುವ ಆಹಾರಕ್ಕೂ ಹೊಂದಿಕೆಯಾಗುತ್ತಿಲ್ಲ, ವೈದ್ಯರ ಡಯೆಟ್ ಸಾಕಷ್ಟು ನಿಯಂತ್ರಿತ ಮತ್ತು ಕಟ್ಟುನಿಟ್ಟಾಗಿದೆ ಅಲ್ಲಿ ಎಲ್ಲೂ ಸಿಹಿ ತಿನಿಸು ಸೇವಿಸಲು ಸೂಚಿಸಿಲ್ಲ ಆದರೆ ಅವರು ಸೇವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಜ್ರಿವಾಲ್ ಪರ ವಾದಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಕೇಜ್ರಿವಾಲ್ ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 12 ವರ್ಷಗಳಿಂದ ಅವರು ಪ್ರತಿದಿನ ಇನ್ಸುಲಿನ್ ಪಡೆಯುತ್ತಿದ್ದಾರೆ. ಅವರಿಗೆ ಪ್ರತಿದಿನ ಇನ್ಸುಲಿನ್ ನೀಡಲಾಗುತ್ತಿದೆ. ಜೈಲಿನಲ್ಲಿ ಇನ್ಸುಲಿನ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ವೈದ್ಯರ ನೆರವು ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಿಚಾರಣೆಯಲ್ಲಿ ಭಾಗಿಯಾದ ತಿಹಾರ್ ಜೈಲು ಅಧಿಕಾರಿಗಳ ಪರವಾಗಿ ವಕೀಲ ಯೋಗಿಂದರ್ ಹಾಂಡೂ ಹಾಜರಾಗಿ ಅವರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ, ನಾವು ಏಮ್ಸ್‌ನಿಂದ ಅಭಿಪ್ರಾಯವನ್ನು ಪಡೆದುಕೊಂಡಿದ್ದೇವೆ. ಅವರು ಮಾವಿನಹಣ್ಣುಗಳನ್ನು ತಪ್ಪಿಸಬೇಕು. ಅವರು ಹೆಚ್ಚು ಇನ್ಸುಲಿನ್ ತೆಗೆದುಕೊಂಡರೆ, ಸಕ್ಕರೆಯ ಮಟ್ಟವು ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ವಾದಿಸಿದರು.