ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ (Delhi Air Pollution) ಬಿಕ್ಕಟ್ಟು ತೀವ್ರಗೊಂಡಿದೆ. ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಮಟ್ಟಕ್ಕೆ ತಲುಪಿದ ಹಿನ್ನೆಲೆ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಮ್ (Work From Home) ಕಡ್ಡಾಯಗೊಳಿಸಿ, ಆದೇಶ ಹೊರಡಿಸಿದೆ.
ಇದರೊಂದಿಗೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲ್ಯಾನ್ (GRAP) ಅಡಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳನ್ನ ದೀರ್ಘಕಾಲ ಕೈಗೊಳ್ಳದಂತೆ ಕಾರ್ಮಿಕರಿಗೆ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಇನ್ನೂ ನಿರ್ಮಾಣ ಕಾಮಗಾರಿ ನಿಷೇಧಿಸಿರುವುದರಿಂದ, ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 10,000 ರೂ. ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ (Delhi Government) ಘೋಷಿಸಿದೆ.
ಡಿಸೆಂಬರ್ 15 ರಂದು ದೆಹಲಿಯ ವಾಯುಮಾಲಿನ್ಯವು ಈ ಋತುವಿನಲ್ಲೇ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿತ್ತು. ಅದಕ್ಕೂ ಹಿಂದಿನ ದಿನವೂ ವಾಯುಮಾಲಿನ್ಯ ‘ತೀವ್ರ’ ಮಟ್ಟಕ್ಕೆ ಏರಿದ್ದು, ನಂತರ ‘ತೀವ್ರ ಪ್ಲಸ್’ ವಲಯಕ್ಕೆ ತಲುಪಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಯಂತ್ರಿಸಲು, ವಾಯುಮಾಲಿನ್ಯ ನಿರ್ವಹಣಾ ಆಯೋಗವು ಕಠಿಣ ನಿರ್ಬಂಧಗಳಾದ ‘ಗ್ರಾಪ್ 5’ ಅನ್ನು ಜಾರಿಗೊಳಿಸಿತು.
ನಿರ್ಮಾಣ ಕಾಮಗಾರಿಗಳು ಸ್ಥಗಿತ
ಗ್ರಾಪ್-5 ನಿಯಮಗಳ ಅಡಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನ ನಿಲ್ಲಿಸಲಾಗಿದೆ. ಇದರಿಂದಾಗಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ದೆಹಲಿ ಸರ್ಕಾರ 10,000 ರೂಪಾಯಿಗಳ ಪರಿಹಾರ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

