ಜಾಮಿಯಾ ವಿವಿಯ 3 ವಿದ್ಯಾರ್ಥಿಗಳು, ಮಾಜಿ ಕೈ ಶಾಸಕನ ವಿರುದ್ಧ ಎಫ್‍ಐಆರ್

Public TV
3 Min Read
jamia

– ಪೊಲೀಸರ ಮೇಲೆ ಕಲ್ಲು ತೂರಾಟ ಹಿನ್ನೆಲೆ ಎಫ್‍ಐಆರ್
– ಬಸ್, ಕಾರು, ಬೈಕ್‍ಗಳಿಗೆ ಬೆಂಕಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ದೆಹಲಿಯಲ್ಲಿಯೂ ಹಿಂಸಾಚಾರಕ್ಕೆ ತಿರುಗಿದೆ. ಈ ಪೈಕಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿ, ಹಿಂಸಾಚಾರ ನಡೆಸಿದ್ದರು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಮಂಗಳವಾರ ನಡೆದ ತೀವ್ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಸಹ ಹಲ್ಲೆ ನಡೆಸಿದ್ದರು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.

ಒಟ್ಟು ಏಳು ಜನರ ವಿರುದ್ಧ ಎಫ್‍ಐಆರ್ ಹಾಕಲಾಗಿದ್ದು, ಕಾಂಗ್ರೆಸ್‍ನ ಮಾಜಿ ಶಾಸಕ ಆಸಿಫ್ ಖಾನ್ ಹಾಗೂ ಸ್ಥಳೀಯ ರಾಜಕಾರಣಿಗಳಾದ ಅಶು ಖಾನ್, ಮುಸ್ತಫಾ, ಹೈದರ್, ಎಐಎಸ್‍ಎ ಸದಸ್ಯ ಚಂದನ್ ಕುಮಾರ್, ಎಸ್‍ಐಓ ಸದಸ್ಯ ಆಸಿಫ್ ತನ್ಹಾ ಹಾಗೂ ಸಿವೈಎಸ್‍ಎಸ್ ಸದಸ್ಯ ಖಾಸಿಂ ಉಸ್ಮಾನಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗಿನಿಂದ ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕುವವರೆಗೆ ಸಾಕಷ್ಟು ಜನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ಸುತ್ತ ಸಾಕಷ್ಟು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಪ್ರತಿಭಟನೆ ನಡೆಸಲು ಪುರುಷರು, ಮಹಿಳೆಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ವಿಶ್ವವಿದ್ಯಾಲಯದ ಕಡೆಯಿಂದ ಬಂದರು ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಹೊರ ಬರುತ್ತಿದ್ದಂತೆ ಆಸಿಫ್ ಹಾಗೂ ಅಶು ಪ್ರಚೋದನಾತ್ಮ ಹೇಳಿಕೆಗಳನ್ನು ನೀಡಿ ಪ್ರತಿಭಟನಾಕಾರರನ್ನು ಪ್ರಚೋದಿಸಿದರು. ಅಲ್ಲದೆ ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಮಥುರಾ ರಸ್ತೆ ಮೂಲಕ ಜಾಥಾ ನಡೆಸಿದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭವಾಯಿತು. ಅಲ್ಲದೆ ದೆಹಲಿ ನಗರ ಸಾರಿಗೆ ಬಸ್‍ಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು ಎಂದು ಎಫ್‍ಐಆರ್ ನಲ್ಲಿ ನಮೂದಿಸಲಾಗಿದೆ.

ರಸ್ತೆ ಹಾಗೂ ಸಾರೈ ಜುಲೆನಾ ಪೊಲೀಸ್ ಬೂತ್‍ನಲ್ಲಿದ್ದ ಹಲವು ವಾಹನಗಳನ್ನು ಧ್ವಂಸ ಮಾಡಿದರು. ನಂತರ ವಿಶ್ವವಿದ್ಯಾಲಯದ ಕಡೆಗೆ ತೆರಳಿದರು. ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರೂ ಕೇಳಲಿಲ್ಲ. ಕೆಲವು ಅಂಬುಲೆನ್ಸ್ ಗಳಿಗೂ ಬೆಂಕಿ ಹಚ್ಚಿದರು ಎಂದು ಎಫ್‍ಐಆರ್ ನಲ್ಲಿ ತಿಳಿಸಲಾಗಿದೆ.

ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಗುಂಪು ಚದುರಿಸಲು ಗ್ಯಾಸ್ ಫಿರಂಗಿ ಬಳಸಿದೆವು. ಆದರೂ ಪ್ರತಿಭಟನಾಕಾರರು ಗೇಟ್ ನಂ.4,7 ಹಾಗೂ 8ರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು. ಆಗ ಪೊಲೀಸ್ ಸಿಬ್ಬಂದಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಿ ಹಿಂಸಾತ್ಮಕ ಪ್ರತಿಭನಾಕಾರರನ್ನು ಎಳೆತಂದರು ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಇಷ್ಟಾದರೂ ಪ್ರತಿಭಟನಾಕಾರರು ಟಿಕೋನಾ ಪಾರ್ಕ್, ಝಾಕೀರ್ ನಗರ, ಧಲನ್ ಪೊಲೀಸ್ ಬೂತ್ ಬಳಿಯ ಸುಮಾರು 70 ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಎಫ್‍ಐಆರ್ ದಾಖಲಿಸಿದ ಪೊಲೀಸರ ಕ್ರಮವನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಖಂಡಿಸಿದ್ದು, ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ನಾವು ಸಂವಿಧಾನದ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಭಾರತದ ಜಾತ್ಯಾತೀತತೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

ಕಾಂಗ್ರೆಸ್‍ನ ಮಾಜಿ ಶಾಸಕ ಆಸಿಫ್ ಖಾನ್ ಪ್ರತಿಕ್ರಿಯಿಸಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಜಾಮಿಯಾ ನಗರದ ಎಸ್‍ಎಚ್‍ಒ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಾಹೀನ್ ಬಾಗ್ ನಲ್ಲಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ನ್ಯೂ ಫ್ರೆಂಡ್ಸ್ ಕಾಲೋನಿ ಹಾಗೂ ಜಾಮಿಯಾ ನಗರದಲ್ಲಿ ಏಕೆ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *