ನವದೆಹಲಿ: ಇಲ್ಲಿನ ಆಸ್ಪತ್ರೆಯೊಂದರಲ್ಲಿ (Delhi Hospital) ಬೆಂಕಿ ಅವಘಡದಲ್ಲಿ ಏಳು ನವಜಾತ ಶಿಶುಗಳು (Newborn Babies) ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ಕರ್ತವ್ಯದಲ್ಲಿದ್ದ ಮತ್ತೊಬ್ಬ ವೈದ್ಯನನ್ನೂ ಬಂಧಿಸಲಾಗಿದೆ. ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯ ಮಾಲೀಕ ಡಾ.ನವೀನ್ ಖಿಚಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ನಂತರ ಪರಾರಿಯಾಗಿದ್ದರು. ಇದನ್ನೂ ಓದಿ: ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ -6 ನವಜಾತ ಶಿಶುಗಳು ಬಲಿ
ಎರಡು ಅಂತಸ್ತಿನ ಕಟ್ಟಡದಲ್ಲಿ ಇರಿಸಲಾಗಿದ್ದ ಆಕ್ಸಿಜನ್ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಲೇನ್ ಕಿರಿದಾಗಿದ್ದು, ಓವರ್ ಹೆಡ್ ತಂತಿಗಳಿಂದ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅಗ್ನಿಶಾಮಕ ದಳದವರು ಸವಾಲುಗಳನ್ನು ಎದುರಿಸಿದರು.
ನಾವು ಎದುರಿಸಿದ ಮತ್ತೊಂದು ಸವಾಲೆಂದರೆ ಯಾವುದೇ ನೀರಿನ ಮೂಲವಿರಲಿಲ್ಲ. ನೇತಾಡುತ್ತಿದ್ದ ವಿದ್ಯುತ್ ತಂತಿಗಳು ದೊಡ್ಡ ಸಮಸ್ಯೆಯಾಗಿದ್ದವು ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಆಯೋಗದ ತಂಡವು ಆಸ್ಪತ್ರೆಗೆ ಭೇಟಿ ನೀಡಲಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆಯಿಂದ ಯುವಕರಿಗೆ 100% ಉದ್ಯೋಗವಕಾಶ: ಅನುರಾಗ್ ಠಾಕೂರ್
ಮಕ್ಕಳ ಆಸ್ಪತ್ರೆಗೆ ಭಾರೀ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಜನರು ಕಾಂಪೌಂಡ್ ಗೋಡೆ ಹತ್ತಿ ಧಾವಿಸಿದ್ದರು. ನವಜಾತ ಶಿಶುಗಳನ್ನು ರಕ್ಷಿಸಲು ಕಟ್ಟಡದ ಹಿಂಭಾಗದಿಂದ ಹತ್ತಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.