ನವದೆಹಲಿ: ನಿಮಗೆ ಭಾರತ (India) ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ. ನಿಮ್ಮ ಸೈಟ್ ಅನ್ನು ನಿರ್ಬಂಧಿಸಲು ನಾವು ಸರ್ಕಾರವನ್ನು ಸೂಚಿಸುತ್ತೇವೆ ಎಂದು ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಗೆ (Wikipedia) ದೆಹಲಿ ಹೈಕೋರ್ಟ್ (Delhi High Court) ಎಚ್ಚರಿಕೆ ನೀಡಿದೆ.
ಸುದ್ದಿ ಸಂಸ್ಥೆ ಎಎನ್‌ಐ (ANI) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಕಿಪೀಡಿಯಗೆ ನ್ಯಾಯಾಂಗ ನಿಂದನೆ ನೋಟಿಸ್ (Contempt of Court) ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಎಎನ್‌ಐಗೆ ಸಂಬಂಧಿಸಿದ ಪೇಜ್ ಎಡಿಟ್ ಮಾಡದಂತೆ ಸೂಚಿಸಿದೆ.
ತನ್ನನ್ನು ಭಾರತ ಸರ್ಕಾರದ ಪ್ರಚಾರ ಸಾಧನ (The Propaganda Tool) ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಎಎನ್‌ಐ ಕೋರ್ಟ್ ಮೊರೆ ಹೋಗಿದೆ. ಈ ಪೇಜ್ ಅನ್ನು ಎಡಿಟ್ ಮಾಡಿದ ಮೂರು ಖಾತೆಗಳ ವಿವರವನ್ನು ಬಹಿರಂಗಪಡಿಸಲು ವಿಕಿಪೀಡಿಯಗೆ ಸೂಚಿಸಿತ್ತು. ಆದರೆ ವಿಕೀಪಿಡಿಯಾ ಈ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳು ತನ್ನ ಸಂಪಾದಕರಲ್ಲ ಎಂದು ವಿಕಿಪೀಡಿಯಾ ಹೇಳಿಲ್ಲ ಎಂದು ಎಎನ್‌ಐ ತಿಳಿಸಿದೆ. ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್
ಅರ್ಜಿ ವಿಚಾರಣೆ ವೇಳೆ ವಿಕಿಪೀಡಿಯ ಪರ ವಕೀಲರು, ತನ್ನ ಕಡೆಯಿಂದ ಕೆಲವು ದಾಖಲೆಗಳ ಸಲ್ಲಿಕೆ ಮಾಡಬೇಕಿದೆ. ವಿಕಿಪೀಡಿಯ ಭಾರತ ಮೂಲದ ಸಂಸ್ಥೆ ಅಲ್ಲದ ಕಾರಣ ಮಾಹಿತಿ ಸಲ್ಲಿಕೆಗೆ ವಿಳಂಬವಾಗಿದೆ ಎಂದು ತಿಳಿಸಿದರು.
ಈ ಉತ್ತರಕ್ಕೆ ಸಿಟ್ಟಾದ ಹೈಕೋರ್ಟ್, ನೀವು ಭಾರತದ ಸಂಸ್ಥೆ ಅಲ್ಲ ಎನ್ನುವುದು ಪ್ರಶ್ನೆಯಲ್ಲ. ಕೋರ್ಟ್ ಸೂಚಿಸಿದಾಗ ಮಾಹಿತಿ ನೀಡಬೇಕು. ನಿಮ್ಮ ವ್ಯಾಪಾರ ವಹಿವಾಟುಗಳನ್ನು ನಾವು ಇಲ್ಲಿ ಬಂದ್ ಮಾಡುತ್ತೇವೆ. ನೀವು ಭಾರತದಲ್ಲಿ ಇರಬೇಕಾದರೆ ದೇಶದ ಕಾನೂನುಗಳನ್ನು ಪಾಲನೆ ಮಾಡಬೇಕು. ನಿಮಗೆ ಭಾರತ ಇಷ್ಟವಿಲ್ಲದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ ಎಂದು ಸೂಚಿಸಿತು.
ಮುಂದಿನ ವಿಚಾರಣೆ ವೇಳೆ ವಿಕಿಪೀಡಿಯ ಪ್ರತಿನಿಧಿ ಹಾಜರಾಗಬೇಕು ಎಂದು ಸೂಚಿಸಿ ಅಕ್ಟೋಬರ್‌ಗೆ ವಿಚಾರಣೆಯನ್ನು ಮುಂದೂಡಿತು.
ವಿಕಿಪೀಡಿಯ ವಿರುದ್ಧ ಎಎನ್‌ಐ 2 ಕೋಟಿ ರೂ. ಮಾನನಷ್ಟ ಕೇಸ್ ಹೂಡಿದೆ. 2001 ರಲ್ಲಿ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರು ವಿಕಿಪೀಡಿಯವನ್ನುಸ್ಥಾಪಿಸಿದ್ದಾರೆ. ವಿಕಿಮೀಡಿಯಾ ಫೌಂಡೇಶನ್‌ನಿಂದ ಇದು ನಡೆಯುತ್ತಿದ್ದು ಅಮೆರಿಕ ಮತ್ತು ಫ್ರಾನ್ಸಿನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ವಿಕಿಪೀಡಿಯ ಪುಟದಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ.