ನವದೆಹಲಿ: ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಳೆದ ಫೆಬ್ರವರಿಯಲ್ಲಿ ಏಳು ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ದೆಹಲಿ ವಿಧಾನಸಭಾ ಸ್ಪೀಕರ್ ಅವರ ಆದೇಶವನ್ನು ದೆಹಲಿ ಹೈಕೋರ್ಟ್ (Delhi High Court) ರದ್ದುಗೊಳಿಸಿದೆ. ಅಮಾನತುಗೊಂಡ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಳಿಕ ಈ ಆದೇಶ ನೀಡಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ (V.K.Saxena) ಅವರ ಭಾಷಣದ ವೇಳೆ ಬಿಜೆಪಿ ಶಾಸಕರಾದ ಮೋಹನ್ ಸಿಂಗ್ ಬಿಶ್ತ್, ಅಜಯ್ ಮಹಾವರ್, ಒ.ಪಿ.ಶರ್ಮಾ, ಅಭಯ್ ವರ್ಮಾ, ಅನಿಲ್ ಬಾಜ್‌ಪೇಯ್, ಜಿತೇಂದರ್ ಮಹಾಜನ್ ಮತ್ತು ವಿಜೇಂದರ್ ಗುಪ್ತಾ ಅವರು 30 ನಿಮಿಷಗಳಲ್ಲಿ ಹತ್ತು ಬಾರಿ ಭಾಷಣವನ್ನು ವಿರಾಮಗೊಳಿಸುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್ ರಿಲೀಫ್
ಅಶಿಸ್ತಿನ ವರ್ತನೆ ತೋರಿದ ಶಾಸಕರ ವಿರುದ್ಧ ಕ್ರಮಕ್ಕೆ ಎಎಪಿ ಶಾಸಕ ದಿಲೀಪ್ ಪಾಂಡೆ ಒತ್ತಾಯಿಸಿದರು. ಬಳಿಕ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಈ ವಿಷಯವನ್ನು ವಿಶೇಷಾಧಿಕಾರ ಸಮಿತಿಗೆ ವರ್ಗಾಯಿಸಿದ್ದರು. ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಏಳು ಬಿಜೆಪಿ ಶಾಸಕರನ್ನು ಸದನದ ಕಲಾಪದಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಸದನವು ಅಂಗೀಕರಿಸಿತ್ತು.
ಬಿಜೆಪಿಯ ಏಳು ಶಾಸಕರು ವಿಶೇಷಾಧಿಕಾರ ಸಮಿತಿಯ ಮುಂದೆ ಕಲಾಪ ಮುಗಿಯುವವರೆಗೆ ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಫೆಬ್ರವರಿ 27 ರಂದು ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ನ್ಯಾಯಾಲಯವು ಏಳು ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಿತು. ಇದನ್ನೂ ಓದಿ: ಅಮೇಥಿಯಿಂದ ರಾಹುಲ್ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?