ನವದೆಹಲಿ: ನಿರ್ಭಯಾ ಪ್ರಕರಣದ ದೋಷಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಬಳಿಕ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ದೆಹಲಿ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವಾಲಯ ಪಟಿಯಾಲ ಹೌಸ್ ಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದವು. ಪಟಿಯಾಲ ಕೋರ್ಟ್ ನಿರ್ಭಯಾ ಪ್ರಕರಣದ ದೋಷಿಗಳ ಡೆತ್ ವಾರೆಂಟ್ ಗೆ ತಡೆಯನ್ನು ನೀಡಿದೆ. ಈ ವೇಳೆ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೋಷಿಗಳು ಕಾನೂನಿನ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ದೋಷಿಗಳು ತಮ್ಮ ಶಿಕ್ಷೆಯನ್ನು ಕಾನೂನಿನ ಮೂಲಕ ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಗಲ್ಲು ಶಿಕ್ಷೆಯನ್ನು ಮುಂದೂಡಲು ತಮ್ಮದೇ ವ್ಯೂಹ ರಚಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದೋಷಿ ಪವನ್ ಗುಪ್ತಾ ಕ್ಷಮಾದಾನ ಅರ್ಜಿ ಸಲ್ಲಿಸಲು ಪ್ಲಾನ್ ಮಾಡಿಕೊಂಡಿದ್ದಾನೆ. ದೋಷಿಗಳು ನ್ಯಾಯ ವ್ಯವಸ್ಥೆಯೊಂದಿಗೆ ಆಟ ಆಡುವ ಮೂಲಕ ದೇಶದ ಜನತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಾನೂನ ಪ್ರಕಾರವೇ ಪ್ರಕಟವಾದ ಶಿಕ್ಷೆಯನ್ನು ಮುಂದೂಡಲು ವ್ಯವಸ್ಥಿತವಾದ ಜಾಲ ರಚಿಸಲಾಗಿದೆ ಎಂದು ತುಷಾರ್ ಮೆಹ್ತಾ ತಮ್ಮ ವಾದ ಮಂಡಿಸಿದರು.
Advertisement
ದೋಷಿಗಳಾದ ಆಕ್ಷಯ್ ಸಿಂಗ್ (31), ವಿನಯ್ ಶರ್ಮಾ (26) ಮತ್ತು ಪವನ್ (25) ಪರವಾಗಿ ವಕೀಲ ಎ.ಪಿ.ಸಿಂಗ್ ವಾದ ಮಂಡಿಸಿದರು. ತಮ್ಮ ವಾದದಲ್ಲಿ ಕೇಂದ್ರ ಸರ್ಕಾರ ಅರ್ಜಿ ಮೂಲಕ ಸಲ್ಲಿಸಿರುವ ಮನವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೋರ್ವ ದೋಷಿ ಮುಖೇಶ್ ಪರವಾಗಿ ವಕೀಲ ರೆಬೆಕಾ ಜಾನ್ ವಾದ ಮಂಡಿಸಿದರು. ಎಲ್ಲರ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.