ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿದೇಶಕ್ಕೆ ತೆರಳಲು ವಿಧಿಸಿದ್ದ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ರದ್ದು ಪಡಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾದ ಬಳಿಕ ಡಿಕೆಶಿಗೆ ವಿದೇಶಕ್ಕೆ ತೆರಳಲು ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲು ಅನುಮತಿ ಕೋರಿ ಡಿಕೆ ಶಿವಕುಮಾರ್, ವಕೀಲ ಮಯಾಂಕ್ ಜೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ದೆಹಲಿ ಹೈಕೋರ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲು ಅನುಮತಿ ನೀಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಜಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದ್ದು, ಬಿಜೆಪಿಯವರು ಧರ್ಮದ್ರೋಹಿಗಳು: ದಿನೇಶ್ ಗುಂಡೂರಾವ್
ಮಾ. 31 ರಿಂದ ಏ.6ರ ನಡುವೆ ದುಬೈ ಮತ್ತು ಅಬುಧಾಬಿಗೆ ಪ್ರಯಾಣಿಸಲು ಅನುಮತಿ ನೀಡಿರುವ ಹೈಕೋರ್ಟ್, ಅಲ್ಲಿಂದ ಹಿಂದಿರುಗಿದ ವಿಷಯವನ್ನು ತನಿಖಾಧಿಕಾರಿಗೆ ತಿಳಿಸಲು ಸೂಚನೆ ನೀಡಿದೆ. ಸದ್ಯ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಅನ್ನ ನೀಡುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ: ರಾಹುಲ್ ಗಾಂಧಿ
ಏನಿದು ಪ್ರಕರಣ?:
ಐಟಿ ಅಧಿಕಾರಿಗಳು 2017 ಆಗಸ್ಟ್ 1ರಂದು ಡಿಕೆ ಶಿವಕುಮಾರ್ ಆಪ್ತರು, ಸಂಬಂಧಿಕರು, ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಚೆನ್ನೈ, ದೆಹಲಿ, ಬೆಂಗಳೂರು, ಮೈಸೂರು, ಕನಕಪುರದ 60 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಚೆನ್ನೈ ಮೂಲದ ಎಲ್‍ಇಡಿ ಕಂಪನಿಯೊಂದರಲ್ಲಿ ಡಿಕೆಶಿ ಪಾಲುದಾರಿಕೆ ಇರುವ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆ ಕಂಪನಿಯನ್ನೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಡಿಕೆಶಿ 36 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು. 2019ರಲ್ಲಿ ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.