100 ರೂ. ಇದ್ದ ಆಸ್ತಿ ಮೌಲ್ಯ ಈಗ 1 ಸಾವಿರಕ್ಕೆ ಏರಿಕೆಯಾಗಿದೆ, ಅಕ್ರಮ ಹೇಗೆ ಆಗುತ್ತೆ – ಸಿಂಘ್ವಿ ಪ್ರಶ್ನೆ

Public TV
4 Min Read
DKSHI DHL copy

– ಬೆಂಗಳೂರು ಸುತ್ತಮುತ್ತ ಆಸ್ತಿಯ ಮೌಲ್ಯ ಹೆಚ್ಚಾಗಿದೆ
– ಗುರುವಾರಕ್ಕೆ ಜಾಮೀನು ಅರ್ಜಿ ಮುಂದೂಡಿದ ಹೈಕೋರ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಗುರುವಾರಕ್ಕೆ ಮುಂದೂಡಿಕೆ ಮಾಡಿದ್ದು, ಇಂದು ಕೂಡ ಡಿಕೆಶಿಗೆ ರಿಲೀಫ್ ಸಿಗಲಿಲ್ಲ.

ನ್ಯಾಯಾಲಯದಲ್ಲಿ ಡಿಕೆ ಶಿವಕುಮಾರ್ ಅವರ ವಕೀಲರಾದ ಸಿದ್ಧಾರ್ಥ್ ಲೂತ್ರಾ ವಾದ ಮಂಡನೆ ಮಾಡಿದರು. 2017 ಆಗಸ್ಟ್ ನಲ್ಲಿ ನಡೆದ ಐಟಿ ದಾಳಿಯಿಂದ ಪ್ರಕರಣ ಆರಂಭವಾಗಿದ್ದು, ಈ ವೇಳೆ 276/1 ಸಿ, 120 ಬಿ ಅಡಿ ದೂರುಗಳನ್ನು ದಾಖಲು ಮಾಡಿಕೊಳ್ಳಲಾಯಿತು. ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ 120 ಬಿ ಅಡಿ ವಿಚಾರಣೆ ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಒಟ್ಟು 4 ಪ್ರಕರಣ ದಾಖಲಾಗಿದ್ದು, ಇದೇ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಆದರೆ ಅನಗತ್ಯವಾಗಿ ಅಕ್ರಮ ಹಣ ವ್ಯವಹಾರ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ದೂರು ದಾಖಲು ಮಾಡಿದ್ದಾರೆ ಎಂದು ಪ್ರಕರಣದ ಹಳೆಯ ಮಾಹಿತಿಯ ವಿವರಣೆಯನ್ನು ಕೋರ್ಟಿಗೆ ನೀಡಿದರು.

DKSHI DHL b copy

ಪ್ರಕರಣ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ್ದು, ಐಟಿ ಕೇಸ್‍ನಲ್ಲಿ ಪ್ರಕರಣದ ವಿಚಾರಣೆ ನಡೆಸಬಹುದುದಾಗಿದೆ. ಅಲ್ಲದೇ ದೇಶದ ಎಲ್ಲಾ ಭಾಗಗಳಲ್ಲಿ ಇಡಿ ಕಚೇರಿ ಇದ್ದು, ಕೇವಲ ದೆಹಲಿಯಲ್ಲಿ ಮಾತ್ರ ಪ್ರಕರಣ ವಿಚಾರಣೆ ಮಾಡಲಾಗುತ್ತಿದೆ. ಆದರೆ ಪ್ರಕರಣ ಬೆಂಗಳೂರಿಗೆ ಸಂಬಂಧಿಸಿದ್ದು ಎಂದು ವಿವರಣೆ ನೀಡಿದರು. ಈ ವೇಳೆ ನ್ಯಾಯಾಧೀಶರು ಪ್ರಕರಣವನ್ನು ದೆಹಲಿಗೆ ಏಕೆ ತಂದರು ಎಂಬ ಪ್ರಶ್ನೆಗೆ ಉತ್ತಸಿದ ವಕೀಲರು, ಪ್ರಕರಣ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಅವರಿಗೆ ವಾದ ಮಂಡನೆಗೆ ಅವಕಾಶ ನೀಡಲಾಯಿತು. ಈ ವೇಳೆ ಇಂದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಪ್ರಕರಣದಲ್ಲಿ ನೀಡಿದ ಆದೇಶಗಳ ಬಗ್ಗೆ ಮಾಹಿತಿ ನೀಡಿದ ಸಿಂಘ್ವಿ ಅವರು, ಪ್ರಕರಣದ ಇತರೇ ಆರೋಪಿಗಳನ್ನು ಬಂಧಿಸದಂತೆ ರಕ್ಷಣೆ ನೀಡಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆ ನೀಡಿದ್ದು, ಇಡಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ ಎಂದು ವಿವರಿಸಿದರು.

DKSHI

ಪ್ರಕರಣವನ್ನು ಐಟಿ ದಾಖಲಿಸಿದ ಕೇಸ್ ಗಳ ಅಡಿ ಇಡಿ ತನಿಖೆ ನಡೆಸಿದ್ದು, 120 ಬಿ ಐಟಿ ಶೆಡ್ಯೂಲ್ ನಲ್ಲಿ ಬರಲ್ಲ. ಇಡಿ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಮಾಡಬೇಕು. ಆದರೆ ಐಟಿ ಆಕ್ಟ್ ಅಡಿ ಇಡಿ ಹೇಗೆ ತನಿಖೆ ಮಾಡುತ್ತೆ ಎಂದರು. ಇಂದಿಗೆ 45 ದಿನಗಳಿಂದ ಡಿಕೆಶಿ ಇಡಿ ಕಸ್ಟಡಿಯಲ್ಲಿದ್ದು, ಐಟಿ ನಿಯಮಗಳ ಅಡಿ ಅನವಶ್ಯಕವಾಗಿ ಕಸ್ಟಡಿಗೆ ಪಡೆದುಕೊಳ್ಳುವಂತಿಲ್ಲ ಎಂದು ಚಿದಂಬರಂ ಪ್ರಕರಣವನ್ನು ಸಿಂಘ್ವಿ ಉಲ್ಲೇಖಿಸಿದರು.

ನನ್ನ ಕಕ್ಷಿದಾರ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಈಗಲೂ ಶಾಸಕರಾಗಿದ್ದಾರೆ. ಸಮಾಜದಲ್ಲಿ ಕೆಲಸ ಮಾಡಬೇಕಿದೆ. ಅವರು ಎಲ್ಲೂ ಕೂಡ ಪರಾರಿಯಾಗುವುದಿಲ್ಲ. ಅವರು ಜನರ ಪ್ರತಿನಿಧಿಯಾಗಿದ್ದು, ಈಗಾಗಲೇ ಸಾಕಷ್ಟು ವಿಚಾರಣೆಗೆ ಸ್ಪಂದಿಸಿದ್ದಾರೆ. ಡಿಕೆಶಿ ಸಾರ್ವಜನಿಕ ಜೀವನದಲ್ಲಿದ್ದು, ಕಸ್ಟಡಿಗೂ ಮೊದಲು ನಾಲ್ಕು ದಿನ, ಪ್ರತಿದಿನ ಒಂಭತ್ತು ಗಂಟೆ ವಿಚಾರಣೆ ನಡೆಸಿದ್ದಾರೆ. ಒಟ್ಟು 35 ಗಂಟೆ ಕಸ್ಟಡಿಗೂ ಮೊದಲು ವಿಚಾರಣೆ ನಡೆದಿದೆ. ಆ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು, ಆ ಬಳಿಕವೇ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಎಲ್ಲವೂ ಸೇರಿ 45 ದಿನಗಳಿಂದ ಇಡಿ ವಶದಲ್ಲಿದ್ದಾರೆ. ನ್ಯಾಯಾಂಗ ಬಂಧನದ ವೇಳೆಯೂ ವಿಚಾರಣೆ ನಡೆಸಲು ಇಡಿ ಮನವಿ ಮಾಡಿತ್ತು. ಪ್ರತಿ ದಿನ 5 ಗಂಟೆ, 2 ದಿನ ಒಟ್ಟು ಹತ್ತು ಗಂಟೆ ವಿಚಾರಣೆ ನಡೆಸಿದ್ದಾರೆ. ಇಡಿ ಕೇಳಿದ ಪ್ರಶ್ನಗಳಿಗೆ ಡಿಕೆಶಿ ಅನಾರೋಗ್ಯದ ನಡುವೆಯೂ ಉತ್ತರಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

dkshivakumar

ಸದ್ಯ ಡಿಕೆ ಶಿವಕುಮಾರ್ ಮೇಲೆ ಸಾಕ್ಷಿ ನಾಶಗಳ ಆರೋಪ ಮಾಡಲಾಗಿದೆ. ಆದರೆ ವಿಚಾರಣೆ ವೇಳೆ ನೀಡಿರುವ ಹೇಳಿಕೆಗಳನ್ನು ಬದಲಾಯಿಸಲು ಹೇಗೆ ಸಾಧ್ಯ? ಜಾಮೀನು ಸಿಗಬಾರದು ಎಂಬ ಕಾರಣಕ್ಕೆ ಇಡಿ ಆರೋಪ ಮಾಡುತ್ತಿದ್ದು, ಸಾಕ್ಷಿ ನಾಶಕ್ಕೆ ಸಂಬಂಧಿಸಿದ ತಡೆಗೆ ಬೇಕಾದ ಕ್ರಮಗಳನ್ನು ಇಡಿ ತೆಗೆದುಕೊಳ್ಳಲಿ. ಈಗಾಗಲೇ ಎಲ್ಲಾ ದಾಖಲೆಗಳು ಇಡಿ ಬಳಿ ಇದೆ. ಇದು ಸಾಕ್ಷಿ ನಾಶ ಮಾಡುವಂತಹ ಪ್ರಕರಣವಲ್ಲ, ಅಲ್ಲದೇ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದರು.

ಈ ಪ್ರಕರಣ ಆರಂಭದಲ್ಲಿ ಕೇವಲ ಐಟಿ ಕೇಸ್ ಆಗಿತ್ತು. ಅಲ್ಲದೇ ಪ್ರಕರಣದಲ್ಲಿ ನೂರಾರು ಕೋಟಿ ರೂ. ಎಂದು ಇಡಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಆದರೆ ಇದನ್ನು ಚುನಾವಣೆ ವೇಳೆಯೇ ಘೋಷಣೆ ಮಾಡಿಕೊಳ್ಳಲಾಗಿದೆ. ಇದು ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಯಾಗಿದ್ದು, ಮಾರುಕಟ್ಟೆ ಬೆಲೆಗಳು ಹೆಚ್ಚಾಗಿದೆ. ಹಿಂದೆ ಖರೀದಿ ಮಾಡಿದ ಆಸ್ತಿ ಬೆಲೆ ಏರಿಕೆಯಾಗಿದೆ. ಒಕ್ಕಲಿಗ ಕೃಷಿ ಆಧಾರಿತ ಕುಟುಂಬವಾಗಿದ್ದು, ಕರ್ನಾಟಕದಲ್ಲಿ ಇವರು ಹೆಚ್ಚು ಕೃಷಿ ಭೂಮಿ ಹೊಂದಿರುತ್ತಾರೆ. ಬೆಂಗಳೂರಿನ ಸುತ್ತಲಿನ ಕೃಷಿ ಭೂಮಿ ಮೌಲ್ಯ ಹೆಚ್ಚಾಗಿದೆ. ಬೆಲೆ ಏರಿಕೆಯನ್ನು ಅಕ್ರಮ ವರ್ಗಾವಣೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

DKSHI Daughter Aishwarya Shivakumar 1

ಪ್ರಕರಣದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ತೋರಿಸದಿದ್ದರೆ ಆಸ್ತಿ ಅಷ್ಟೇ ಆಗಿರುತ್ತದೆ. ತಪ್ಪು ಮಾಹಿತಿ ಕೊಟ್ಟರೆ ಚುನಾವಣಾ ಆಯೋಗ ಸುಮ್ಮನಿರುವುದಿಲ್ಲ. 100 ರೂ. ಇದ್ದ ಆಸ್ತಿ ಮೌಲ್ಯ ಈಗ 1 ಸಾವಿರ ರೂ. ಆಗಿದೆ. ಇಡಿ ಯಾವುದೇ ಹೊಸ ಆಸ್ತಿ ಖರೀದಿ ಮತ್ತು ಹೂಡಿಕೆ ತೋರಿಸದೆ ಘೋಷಿತ ಆಸ್ತಿಯ ಬಗ್ಗೆ ತನಿಖೆ ಮಾಡುತ್ತಿದೆ. 22 ವರ್ಷದ ಮಗಳು ಮತ್ತು 80 ವರ್ಷದ ತಾಯಿಗೆ ಇಡಿ ಸಮನ್ಸ್ ನೀಡಿದೆ. ಇದು ಸರಿಯಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅ.17ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದು, ಸದ್ಯ ಡಿಕೆಶಿ ಪರ ವಕೀಲರ ವಾದ ಬಹುತೇಕ ಮುಕ್ತಾಯವಾಗಿರುವ ಕಾರಣ ಮುಂದಿನ ವಿಚಾರಣೆ ವೇಳೆ ಇಡಿ ಪರ ವಕೀಲರು ವಾದ ಮಂಡನೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಜಾಮೀನು ನಿರಾಕರಿಸಲು ಹೆಚ್ಚುವರಿ ಅಂಶಗಳನ್ನು ಸೇರಿಸುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *