ನವದೆಹಲಿ: ದೆಹಲಿ ಸರ್ಕಾರವು ನಾಳೆ (ಏ.15)ಯಿಂದಲೇ ಇಲ್ಲಿನ ಶಾಲೆಗಳಿಗೆ ಹೊಸ ಕೋವಿಡ್ ಮಾರ್ಗಸೂಚಿ ನೀಡಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ಕೆಲವು ಶಾಲಾ ಮಕ್ಕಳಿಗೆ ಕೊರೊನಾ ಪಾಸಿಟವ್ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕೋವಿಡ್-19 ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿಲ್ಲ. ಆದ್ದರಿಂದ ಆತಂಕ ಪಡಬೇಕಿಲ್ಲ. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಜನರೂ ಸಹ ಕೊರೊನಾದೊಂದಿಗೆ ಬದುಕುವುದನ್ನು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 75 ಸೇರಿ ರಾಜ್ಯದಲ್ಲಿ 93 ಹೊಸ ಪ್ರಕರಣ- ಕೋವಿಡ್ನಿಂದ ಓರ್ವ ಸಾವು
ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕೆಲ ದಿನಗಳಲ್ಲಿ ಶಾಲಾ ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿಯ ಶಾಲೆಗಳಿಗೆ ನಾಳೆಯಿಂದಲೇ ಹೊಸ ಮಾರ್ಗಸೂಚಿಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ 299 ಹೊಸ ಕೋವಿಡ್ ಪ್ರಕರಣಗಳು ವರದಿಯಾದ ಬಳಿಕ ಪ್ರತಿಕ್ರಿಯಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೊರೊನಾ ವೈರಸ್ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. ಅಗತ್ಯಬಿದ್ದರೆ ಶಾಲೆಗಳಲ್ಲಿ ಎಸ್ಒಪಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್ ಕೇಸ್ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45
ದೆಹಲಿಯಲ್ಲಿ ಶೇಕಡಾ 0.5 ರಷ್ಟಿದ್ದ ಪಾಸಿಟಿವಿಟಿ ದರವು ಕಳೆದ ಒಂದು ವಾರದಲ್ಲಿ 2.70ಕ್ಕೆ ಏರಿಕೆಯಾಗಿದೆ. ಆದರೆ, ವೈದ್ಯರು ಇದು ಆತಂಕದ ಬೆಳವಣಿಗೆಯಲ್ಲ ಎಂದು ಹೇಳಿದ್ದರು. ಇದರ ಹೊರತಾಗಿಯೂ ಶಾಲೆಗಳಿಗೆ ಹೊಸ ಮಾರ್ಗಸೂಚಿ ಹೊರಡಿಸುವುದಾಗಿ ಸಿಸೋಡಿಯಾ ಹೇಳಿದ್ದಾರೆ.