ನವದೆಹಲಿ: ಸರ್ಕಾರಿ ವೈದ್ಯೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಕಾರಣ ದೆಹಲಿ ಸರ್ಕಾರ ಸರ್ಕಾರಿ ಆಸ್ಪತ್ರೆಯೊಂದನ್ನು ಸಂಪೂರ್ಣವಾಗಿ ಲಾಕ್ ಮಾಡಿದೆ.
ಕೊರೊನಾ ಸೋಂಕು ತಗುಲಿರುವ ವೈದ್ಯೆ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಆಸ್ಪತ್ರೆಯ ಕಟ್ಟಡದ ಒಪಿಡಿ, ಕಚೇರಿಗಳು ಮತ್ತು ಪ್ರಯೋಗಾಲಯಗಳನ್ನು ಮುಚ್ಚಲಾಗಿದ್ದು, ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದರವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಇತ್ತೀಚೆಗಷ್ಟೇ ಯುಕೆಯಿಂದ ವಾಪಸ್ ಆಗಿದ್ದ ವೈದ್ಯರ ಸಹೋದರ ಮತ್ತು ಅತ್ತಿಗೆಯಿಂದ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ವೈದ್ಯೆ ಅಣ್ಣ ಅತ್ತಿಗೆ ಯುಕೆಯಿಂದ ವಾಪಸ್ ಬಂದ ನಂತರ ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ದೆಹಲಿ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ದಂಪತಿಗೆ ಕೊರೊನಾ ವೈರಸ್‍ಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ರೋಗಿಯನ್ನು ಚಿಕಿತ್ಸೆ ಮಾಡಿದ್ದರಿಂದ ಅವರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿತ್ತು. ಇದಾದ ನಂತರ ಮತ್ತೆ ದೆಹಲಿಯಲ್ಲಿ ಸರ್ಕಾರಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೊರೊನಾ ವೈರಸ್ ಮಹಾಮಾರಿ ದೇಶದಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಲ್ಲಿವರೆಗೆ ದೆಹಲಿಯಲ್ಲಿ 121 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ವೈರಸ್ ನಿಂದ ಎರಡು ಜನ ಸಾವನ್ನಪ್ಪಿದ್ದಾರೆ. ದೆಹಲಿ ಸೋಂಕಿತರಲ್ಲಿ 24 ಜನರು ಮಾರ್ಚ್ 1ರಿಂದ 15ರವರೆಗೆ ನಡೆದಿದ್ದ ತಬ್ಲಿಘಿ ಜಮಾತ್‍ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದವರು ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 146 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 1,719ಕ್ಕೆ ಏರಿದೆ.