ನವದೆಹಲಿ: ಛತ್ತೀಸ್‍ಗಢಕ್ಕೆ ಹೋಗಬೇಕಾಗಿದ್ದ 15 ವರ್ಷದ ಬಾಲಕಿ ರೈಲಿನಲ್ಲಿ ದೆಹಲಿಗೆ ಬಂದಿಳಿದಿದ್ದು, ಕಿಡಿಗೇಡಿಗಳು ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಬಳಿಕ ಮಾರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಹುಮಾಯೂನ್ ಸಮಾಧಿ ಬಳಿ ಶುಕ್ರವಾರ ಬಂಧಿಸಿದ್ದಾರೆ.
ನಡೆದಿದ್ದೇನು?: 15 ವರ್ಷದ ಬಾಲಕಿ ಚತ್ತೀಸ್ ಗಢದಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೊರಟಿದ್ದಳು. ಆದ್ರೆ ಆಕೆ ಆಕಸ್ಮಿಕವಾಗಿ ಬೇರೆ ರೈಲು ಹತ್ತಿದ್ದರಿಂದ ದೆಹಲಿಗೆ ಬಂದಿಳಿದಿದ್ದಾಳೆ. ಈ ವೇಳೆ ಬಾಲಕಿಗೆ ರೈಲ್ವೆ ನಿಲ್ದಾಣದಲ್ಲಿ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಅರ್ಮಾನ್ ಎಂಬಾತ ಪರಿಚಯವಾಗುತ್ತಾನೆ. ಬಳಿಕ ಪತ್ನಿ ಹಸೀನಾಳ ನೆರವಿನೊಂದಿಗೆ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಪಪ್ಪು ಯಾದವ್ ಎಂಬಾತನಿಗೆ ದಂಪತಿ 70,000 ರೂ.ಗೆ ಬಾಲಕಿಯನ್ನು ಮಾರಾಟ ಮಾಡಿದ್ದರು.
Advertisement
ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿದ್ದ ಪಪ್ಪು ಜೊತೆ ಬಾಲಕಿ 2 ತಿಂಗಳವರೆಗೂ ಫರೀದಾಬಾದ್ ನ ಮನೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಯೊಂದಿಗೆ ನೆಲೆಸಿದ್ದಳು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಓಡಿ ಬಂದಿದ್ದ ಬಾಲಕಿಗೆ ಮತ್ತೆ ಹಸೀನಾ ಎದುರಾಗಿದ್ದಳು. ಈ ವೇಳೆ ಮತ್ತು ಬರುವ ಪಾನೀಯವನ್ನು ಬಾಲಕಿಗೆ ಕುಡಿಸಿದ ಹಸೀನಾ ಅವಳನ್ನು 22 ವರ್ಷದ ಮೊಹಮ್ಮದ್ ಅಫ್ರೋಜ್ ಎಂಬ ಯುವಕನಿಗೆ ಮಾರಾಟ ಮಾಡಿದ್ದಾಳೆ.
Advertisement
ರೈಲ್ವೆ ನಿಲ್ದಾಣದಲ್ಲೇ ಅಫ್ರೋಜ್ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹಸೀನಾಗೆ ಒಂದಷ್ಟು ಹಣವನ್ನು ನೀಡಿದ್ದನು. ಹೇಗೋ ಕಾಮುಕನ ಕೈಯಿಂದ ತಪ್ಪಿಸಿಕೊಂಡ ಬಾಲಕಿ ಪ್ರಯಾಣಿಕರ ನೆರವಿನಿಂದ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
Advertisement
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪಪ್ಪು ಯಾದವ್ ಹಾಗೂ ಅಫ್ರೋಜ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸದ್ಯ ಬಾಲಕಿಗೆ ಏಮ್ಸ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ನಡೆಯುತ್ತಿದೆ.