ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

Public TV
1 Min Read
delhi kotla 2

ನವದೆಹಲಿ: ದೆಹಲಿಯ ಪ್ರತಿಷ್ಠಿತ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧಾರ ಕೈಗೊಂಡಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ(ಡಿಡಿಸಿಎ) ಈ ವಿಚಾರವನ್ನು ತಿಳಿಸಿದ್ದು, ಸೆಪ್ಟೆಂಬರ್ 12ರಂದು ನಡೆಯಲಿರುವ ಸಮಾರಂಭದಲ್ಲಿ ಮರುನಾಮಕರಣ ಮಾಡಲಾಗುವುದು. ಅಲ್ಲದೆ, ಕೋಟ್ಲಾ ಸ್ಟ್ಯಾಂಡ್‍ಗೆ ಈ ಹಿಂದೆ ಘೋಷಿಸಿದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದೆ.

ಮೈದಾನಕ್ಕೆ ಫಿರೋಜ್ ಷಾ ಕೋಟ್ಲಾ ಎಂದೇ ಕರೆಯಲಾಗುತ್ತದೆ, ಆದರೆ ಕ್ರೀಡಾಂಗಣದ ಹೆಸರನ್ನು ಮಾತ್ರ ಮರುನಾಮಕರಣ ಮಾಡಲಾಗುತ್ತದೆ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ.

ಈ ಕುರಿತು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಮಾತನಾಡಿ, ವಿರಾಟ್ ಕೊಹ್ಲಿ, ವಿರೇಂದ್ರ  ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ರಿಷಬ್ ಪಂತ್‍ರಂತಹ ಆಟಗಾರರಿಗೆ ಅರುಣ್ ಜೇಟ್ಲಿ ಅವರು ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು. ಇವೆರಲ್ಲರೂ ಭಾರತ ಹೆಮ್ಮೆ ಪಡುವಂತಹ ನಾಯಕರು ಎಂದು ಶರ್ಮಾ ತಿಳಿಸಿದ್ದಾರೆ.

ಜೇಟ್ಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಅಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ದರ್ಜೆಯ ಡ್ರೆಸ್ಸಿಂಗ್ ರೂಂ ನಿರ್ಮಿಸುವುದರ ಜೊತೆಗೆ ಕ್ರೀಡಾಂಗಣದ ಸಾಮಥ್ರ್ಯವನ್ನು ಹೆಚ್ಚಿಸಿದ್ದಾರೆ ಎಂದು ಶರ್ಮಾ ಇದೇ ವೇಳೆ ಜೇಟ್ಲಿ ಅವರ ಕಾರ್ಯವನ್ನು ಸ್ಮರಿಸಿದ್ದಾರೆ.

delhi kotla

ಸೆಪ್ಟೆಂಬರ್ 12ರಂದು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿರಲಿದ್ದಾರೆ.

ಫಿರೋಜ್ ಷಾ ಕ್ರೀಡಾಂಗಣವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಭಾರತ ಎರಡನೇ ಅತ್ಯಂತ ಹಳೇಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. 1883ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಕ್ರೀಡಾಂಗಣದ ಸಾಮರ್ಥ್ಯ 40 ಸಾವಿರಕ್ಕಿಂತ ಹೆಚ್ಚಿದೆ. ಈ ಕ್ರೀಡಾಂಗಣ 34 ಟೆಸ್ಟ್ ಪಂದ್ಯಗಳು, 25 ಏಕದಿನ ಮತ್ತು 5 ಟಿ-20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.

Share This Article
Leave a Comment

Leave a Reply

Your email address will not be published. Required fields are marked *