ನವದೆಹಲಿ: ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ಸೋಲು ಕಂಡಿದ್ದಾರೆ. ಆದಾಗ್ಯೂ ತನ್ನ ತಾಯಿಯನ್ನು ಸೋಲಿಸಿದ ಕೇಜ್ರಿವಾಲ್ (Arvind Kejriwal) ವಿರುದ್ಧ ಸೇಡು ತೀರಿಕೊಳ್ಳುವಲ್ಲಿ ಸಂದೀಪ್ ದೀಕ್ಷಿತ್ (Sandeep Dikshit) ಯಶಸ್ವಿಯಾಗಿದ್ದಾರೆ.
ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಾಹಿಬ್ ಸಿಂಗ್ ವಿರುದ್ಧ 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇತ್ತ 3ನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ 4,568 ಮತಗಳನ್ನ ಪಡೆದುಕೊಂಡಿದ್ದಾರೆ. ಆಪ್ ಪಾಲಿನ ಮತಗಳನ್ನು ತಿಂದುಹಾಕಿರುವ ಸಂದೀಪ್ ದೀಕ್ಷಿತ್, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು
ಸತತ 3ನೇ ಬಾರಿಗೆ ನವದೆಹಲಿ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಜ್ರಿವಾಲ್ ಒಟ್ಟು 25,999 ಮತಗಳನ್ನು ಪಡೆದಿದ್ದರೆ, ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ಒಟ್ಟು 30,088 ಮತಗಳನ್ನು ಪಡೆದುಕೊಂಡಿದ್ದು 4,089 ಮತಗಳಿಂದ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹೀನಾಯ ಸೋಲು
1993ರಿಂದ ಸತತವಾಗಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಶೀಲಾ ದೀಕ್ಷಿತ್ ಅವರನ್ನ ಅರವಿಂದ್ ಕೇಜ್ರಿವಾಲ್ 2013ರಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲಿಸಿದ್ದರು. 25,864 ಮತಗಳ ಅಂತರದಿಂದ ಕೇಜ್ರಿವಾಲ್ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ
ಲೋಕಸಭಾ ಚುನಾವಣೆ ವೇಳೆ INDIA ಒಕ್ಕೂಟದ ಭಾಗವಾಗಿದ್ದ ಕಾಂಗ್ರೆಸ್ ಮತ್ತು ಆಪ್ ದೆಹಲಿಯಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡಿತ್ತು. ಸದ್ಯದ ಚುನಾವಣಾ ಫಲಿತಾಂಶ ಗಮನಿಸಿದರೆ ಆಪ್ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಮತಗಳನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗಿವೆ. ಹೀಗಾಗಿ ಇಂಡಿಯಾ ಮೈತ್ರಿ ಕಡಿದುಕೊಂಡು ಆಪ್ ತಪ್ಪು ಮಾಡಿತೆ ಎಂಬ ಪ್ರಶ್ನೆಯೂ ಎದ್ದಿದೆ.