`ದೆಹಲಿ ಸುಲ್ತಾನ’ – ಮೌನಿ ಬಾಬಾ ಹಾಗೂ ತೀರ್ಥಯಾತ್ರೆ..!!

Public TV
4 Min Read
Arvind Kejrival

ದಿವಾಕರ್
ಮಾತು `ಮತ’ ಕೆಡಿಸಿತು… ಮೌನ `ಮತ’ ಗಳಿಸಿತು..!! ಎಲ್ಲಾ ಉಚಿತ… ಮತ ಖಚಿತ…!! ಅರವಿಂದ ಕೇಜ್ರಿವಾಲ್ ಕೈಗೆ ಮತ್ತೆ ರಾಜದಂಡ ದಯಪಾಲಿಸಿ, ದೈತ್ಯ ಬಿಜೆಪಿಯನ್ನು ಹೊಸಕಿ ಹಾಕಿರುವ ದೆಹಲಿ ಜನಾದೇಶದ ಗುಟ್ಟು ಈ ಎರಡು ಸಾಲುಗಳಲ್ಲೇ ಅಡಗಿದೆ.

ಒಬ್ಬ `ಮೌನಿ ಬಾಬಾ’ ಇಡೀ ದೆಹಲಿ ಚುನಾವಣೆಯ ದಿಕ್ಕು ದೆಸೆಯನ್ನೇ ಬದಲಿಸಿಬಿಟ್ಟಿದ್ದಾನೆ!! ಒಬ್ಬ `ಮೌನಿ ಬಾಬಾ’, ಕೇಜ್ರಿವಾಲ್‍ನ ಹ್ಯಾಟ್ರಿಕ್ ಹೀರೋ ಮಾಡಿಬಿಟ್ಟಿದ್ದಾನೆ!! ಒಬ್ಬ `ಮೌನಿ ಬಾಬಾ’ ಮಾತಿನ ಮಲ್ಲ ಮೋದಿ-ಅಮಿತ್ ಶಾ ಚಾಣಕ್ಯ ಜೋಡಿಯನ್ನು ಮಕಾಡೆ ಮಲಗಿಸಿಬಿಟ್ಟಿದ್ದಾನೆ!! ಆ `ಮೌನಿ ಬಾಬಾ’ನ ಕ್ಷಾತ್ರ ಗುಣಕ್ಕೆ ಕುರುಕ್ಷೇತ್ರದಲ್ಲಿ ಕೇಸರಿ ಗಣ ಹೇಳ ಹೆಸರಿಲ್ಲದಂತೆ ಕಳೆದು ಹೋಗಿದೆ. ಇನ್ನು ಕಾಂಗ್ರೆಸ್‍ನಲ್ಲಿ ಶೂನ್ಯ ಆವರಿಸಿದೆ.

DIVAKAR Public TV

ಕೇಜ್ರಿವಾಲ್ ಪಾಲಿಗೆ ವರದ ಹಸ್ತನಾಗಿದ್ದ ಆ ಮೌನಿ ಬಾಬಾ., ಮೋದಿ ಪಾಲಿಗೆ ಶಾಪವಾಗಿ ಕಾಡಿದ್ದಾನೆ. ದೆಹಲಿ ಗದ್ದುಗೆ ಗುದ್ದಾಟದಲ್ಲಿ ಆ ಮೌನಿ ಬಾಬಾ ಅತೀವ ಹಾಗೂ ಅದ್ಭುತ ಪ್ರಭಾವ ಬೀರಿದ್ದಂತೂ ನಿಜ. ಹಾಗಾದ್ರೆ ಯಾರು ಆ ಮೌನಿ ಬಾಬಾ..!? ದೇವ ಮಾನವನಾ..? ಅವದೂತನಾ..? ಮಹಾಮಹಿಮನಾ..? ತ್ರಿಕಾಲ ಜ್ಞಾನಿಯಾ..? ಊಹೂಂ ಇವರಾರೂ ಅಲ್ಲ.

ಮೌನಿ ಬಾಬಾ ಅಂದರೆ ಮೌನ ..! ನಮ್ಮೊಳಗಿನ ಮೌನ ಅಷ್ಟೇ..!! ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿನಲ್ಲಿ ನಿರಾಕಾರ ಮೌನದ ಕಾಣಿಕೆ ಬೆಟ್ಟದಷ್ಟಿದೆ ಅಂದರೆ ಎಲ್ಲರೂ ಒಪ್ಪಲೇಬೇಕು. ರಾಜಕೀಯದಲ್ಲಿ ಮಾತೆಂಬುದು ಅತ್ಯಂತ ಶಕ್ತಿಶಾಲಿ ಸಾಧನ. ಇಂಥ ಪ್ರಬಲ ಅಸ್ತ್ರವನ್ನೇ ತ್ಯಜಿಸಿದ ಅರವಿಂದ ಕೇಜ್ರಿವಾಲ್, ಮೌನವನ್ನು ರೂಢಿಸಿಕೊಂಡು ಎದುರಾಳಿಗಳನ್ನು ನೆಲಕ್ಕೆ ಕೆಡವಿದ್ದು ಮಾತ್ರ ಪ್ರತಿಶತ ಸತ್ಯ..!!

ಹೌದು, ನೀವು ಕೂಡ ಗಮನಿಸಿರಬಹುದು. ಪ್ರತಿನಿತ್ಯ ಮೋದಿ ವಿರುದ್ಧ ಮೊನಚಾದ ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ವಾಚಾಳಿ ಅರವಿಂದ ಕೇಜ್ರಿವಾಲ್ ಕಳೆದ ಲೋಕಸಭೆ ಚುನಾವಣೆ ಬಳಿಕ ಮೌನಕ್ಕೆ ಶರಣಾಗಿದ್ದರು. `ಮಾತು ಕಡಿಮೆ – ಹೆಚ್ಚು ದುಡಿಮೆ’ ಎಂಬ ಆದರ್ಶದ ಕಡೆ ವಾಲಿಬಿಟ್ಟಿದ್ದರು. ಮೌನದಿಂದಲೇ ಮೋದಿಯನ್ನು ಸೋಲಿಸುವ ತಂತ್ರ ಹೆಣೆದು, ಅದನ್ನು ಕಾರ್ಯರೂಪಕ್ಕೆ ತಂದಿದ್ದರು. `ಮೌನ’ ಪ್ರತಿಜ್ಞೆಯ ಹಿಂದೆ ಮಾಡು ಮಡಿ ಸ್ಥಿತಿಯ ಕಾರಣವೂ ಇತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಕ್ಷರಶಃ ಸಮಾಧಿಯಾಗಿತ್ತು. ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ ಧೂಳೆಬ್ಬಿಸಿದ್ದ ಮೋದಿ ಪಡೆ `ಆಪ್’ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಿತ್ತು. ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಐವರು ಠೇವಣಿ ಕಳೆದುಕೊಂಡಿದ್ದರು. ಅಷ್ಟರ ಮಟ್ಟಿಗೆ ಆಮ್ ಆದ್ಮಿ ಪಾರ್ಟಿಯನ್ನು ಮಟ್ಟ ಹಾಕಿದ್ದರು ಮೋದಿ. ಲೋಕಸಭೆ ಮಾತ್ರವಲ್ಲ ದೆಹಲಿ ವಿಧಾನಸಭೆಯೂ ಬಿಜೆಪಿ ಪಾಲು ಅಂತ ಅಂದೇ ಕುಣಿದು ಕುಪ್ಪಳಿಸಿದ್ದರು ಕೇಸರಿ ಕಾರ್ಯಕರ್ತರು. ಆದ್ರೆ ಮತದಾರ ಪ್ರಭುವಿನ ಮನದಾಳ ಅರಿತವರು ಯಾರು..? ಕೆಲವೇ ತಿಂಗಳಲ್ಲಿ ಬದಲಾಗೋಯ್ತು ದೆಹಲಿ ಮತದಾರರ ನಿಷ್ಠೆ..!!

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತ್ರ ಒಣ ಮಾತಿಂದ ಏನೂ ಆಗದು ಎಂಬ ತೀರ್ಮಾನಕ್ಕೆ ಬಂದ ಕೇಜ್ರಿವಾಲ್ ಮೌನವೆಂಬ ಆಭರಣ ತೊಟ್ಟುಬಿಟ್ಟರು. ಮೋದಿಯನ್ನು ಟೀಕಿಸದೇ, ಕುಟುಕದೇ, ಕೆಣಕದೇ, ಕೆರಳಿಸದೇ, ಕಟಕಿಯಾಡದೇ, ಎಲ್ಲೂ ಕಲಹಕ್ಕೆ ಆಸ್ಪದ ಕೊಡದೇ ಮೌನಂ ಶರಣಂ ಗಚ್ಛಾಮಿ ಅಂತ ಬಾಯ್ಮೇಲೆ ಬೆರಳಿಟ್ಟು ಬಿಟ್ಟರು ಕೇಜ್ರಿವಾಲ್.

ಆಗಸ್ಟ್ 16 ಕೇಜ್ರಿವಾಲ್ ಜನ್ಮದಿನ. ಅಂದು ಮೋದಿ ಕೇಜ್ರಿವಾಲ್‍ಗೆ ಶುಭಾಶಯ ಹೇಳಿದ್ದರು. ಶುಭಾಶಯ ಸಂದೇಶವನ್ನು ವಿನಮ್ರವಾಗಿ ಸ್ವೀಕರಿಸಿದ್ದ ಕೇಜ್ರಿವಾಲ್, ` Thank you so much PM sir for ur good wishes…’.’ ಎಂದು ಅಚ್ಚರಿದಾಯಕ ಪ್ರತಿಕ್ರಿಯೆ ನೀಡಿದ್ದರು. 2014ರ ಚುನಾವಣೆ ವೇಳೆ ವಾರಾಣಸಿಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟಿದ್ದು ಇವರೇನಾ ಅನ್ನುವಷ್ಟು ಬದಲಾವಣೆಯನ್ನು ಅರವಿಂದ ಕೇಜ್ರಿವಾಲ್ ಅವರಲ್ಲಿ ತಂದಿದ್ದ ಮೌನಿ ಬಾಬಾ.!!

Modi Arvinde Kejriwal Delhi Election

ಇಷ್ಟಕ್ಕೇ ನಿಲ್ಲಲಿಲ್ಲ ಕೇಜ್ರಿವಾಲ್ ರಾಜಕೀಯ ವರಸೆ…, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ಯನ್ನು ರದ್ದು ಮಾಡಿದ ಮೋದಿ ವಿರುದ್ಧ ವೈರಿಗಳೆಲ್ಲಾ ಕತ್ತಿ ಮಸೆಯುತ್ತಿದ್ದರೆ, ಇತ್ತ ಆಮ್ ಆದ್ಮಿ ಪಕ್ಷ ಮಾತ್ರ ಕೇಂದ್ರದ ನಿಲುವನ್ನು ಸ್ವಾಗತಿಸಿತ್ತು..!! ಮೋದಿ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಅಂತ ಹೇಳಿದ್ದರು ಕೇಜ್ರಿವಾಲ್ !! ಕೇಜ್ರಿವಾಲ್ ಅವರ ಈ ಚತುರ ನಡೆಯಿಂದ ಮೋದಿಯಂಥ ಮೋದಿಯೇ ಅವಾಕ್ ಆಗಿದ್ದರು.

ಅಷ್ಟೇ ಅಲ್ಲ ಬಿಜೆಪಿಯ ಹಿಂದುತ್ವ ಅಜೆಂಡಾಗೆ ಮೃದು ಹಿಂದುತ್ವದ ಮೂಲಕವೇ ಪೆಟ್ಟು ಕೊಟ್ಟರು ಅರವಿಂದ ಕೇಜ್ರಿವಾಲ್. ಇದರಲ್ಲಿ ಅವರು ಹೊರತಂದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ ಪ್ರಮುಖವಾದದ್ದು. ದೆಹಲಿಯ 60 ವರ್ಷ ಮೇಲ್ಪಟ್ಟ ವೃದ್ಧರಿಗೆಂದೇ ರೂಪಿಸಲಾದ `ಉಚಿತ’ ತೀರ್ಥಯಾತ್ರೆ ಕಾರ್ಯಕ್ರಮ ನಿಸ್ಸಂಶಯವಾಗಿ ಕೇಜ್ರಿವಾಲ್ ಜನಪ್ರಿಯತೆ ಹೆಚ್ಚಿಸಿತು. ದೆಹಲಿಯ ವೃದ್ಧ ತಂದೆ-ತಾಯಂದಿರ ಪಾಲಿಗೆ ಕೇಜ್ರಿವಾಲ್ ಆಧುನಿಕ ಶ್ರವಣಕುಮಾರನಂತೆ ಕಂಡರು.

Amit Shah

ಇನ್ನು ದೆಹಲಿಯ ಶಾಲೆಗಳಲ್ಲಿ ದೇಶಭಕ್ತಿ ವಿಷಯಗಳ ಬೋಧನೆಗೆಂದೇ ಪ್ರತ್ಯೇಕ ಸಮಯ ಮೀಸಲಿಟ್ಟು ಆದೇಶ ಹೊರಡಿಸಿದ ಕೇಜ್ರಿವಾಲ್, ಮೋದಿಯ ರಾಷ್ಟ್ರಭಕ್ತಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ್ದರು. ಈ ಮೂಲಕ ಆಮ್ ಆದ್ಮಿ ಪಾರ್ಟಿ ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಅಲ್ಲ ಎಂದು ಪ್ರಚಾರ ಮಾಡಿದ್ದರು. ಇದು ಕೂಡ ಮತದಾರರ ಮೇಲೆ ಗಾಢ ಪ್ರಭಾವ ಬೀರಿತ್ತು .

ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿ ಜನತೆಗೆ `Free’ಮ್ಯಾನ್ (ಕೇಜ್ರಿವಾಲ್) ಕೊಟ್ಟ ಉಚಿತ ಭಾಗ್ಯಗಳ ಸ್ಕೀಮುಗಳು ಬಂಪರ್ ಮತ ಫಸಲಿಗೆ ಕಾರಣವಾದವು. ಉಚಿತ ವಿದ್ಯುತ್, ಉಚಿತ ವೈದ್ಯಕೀಯ ಸೇವೆ (ಮೊಹಲ್ಲಾ ಕ್ಲಿನಿಕ್) ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣ, ಶುದ್ಧ ನೀರು ಪೂರೈಕೆ, ಸ್ವಚ್ಛ ಆಡಳಿತ… ಹೀಗೆ ಹತ್ತು ಹಲವು ಜನಸೇವೆಯೇ ಜನಾರ್ದನ ಸೇವೆ ಕಾರ್ಯಗಳು ಅರವಿಂದ ಕೇಜ್ರಿವಾಲ್‍ಗೆ ಹ್ಯಾಟ್ರಿಕ್ ಪಟ್ಟ ಕಟ್ಟಿವೆ.

arvind kejriwal BJP

ಪ್ರಚಂಡ ವೈಯಕ್ತಿಕ ಪ್ರಭಾವ, ಆರ್ಟಿಕಲ್ 370 ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ರಾಮಮಂದಿರದಂಥ ಪ್ರಬಲ ಅಸ್ತ್ರಗಳು ಮೋದಿ ಅವರ ಕೈಯಲ್ಲಿದ್ದರೂ, `ಮೌನ’ ಎಂಬ ಬ್ರಹ್ಮಾಸ್ತ್ರದ ಮೂಲಕ ಅವೆಲ್ಲವನ್ನೂ ಹೊಡೆದುರುಳಿಸಿದ್ದಾರೆ ಕೇಜ್ರಿವಾಲ್. ಬಿಜೆಪಿ ವಿರುದ್ಧ `62-8’ರಲ್ಲಿ ಘನ ವಿಜಯ ಸಾಧಿಸಿರುವ ಅವರೀಗ  `ದೆಹಲಿ ಸುಲ್ತಾನ’. ಲಗೇ ರಹೋ ಕೇಜ್ರಿವಾಲ್…!!

ಗಾಳಿಪಟ: ನಮ್ಮ ಸಿದ್ದರಾಮಯ್ಯ ಕೂಡ ಹಲವು ಭಾಗ್ಯಗಳ ಹರಿಕಾರರು?! ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ ಭಾಗ್ಯ…, ಹೀಗೆ ಕರುಣಿಸಿದ ಭಾಗ್ಯಗಳ ಸಂಖ್ಯೆ ಒಂದಾ ಎರಡಾ..? ಇಷ್ಟಾದ್ರೂ ಸಿದ್ದಣ್ಣ ಯಾಕೆ ಗೆಲ್ಲಲಿಲ್ಲ. ಸಿದ್ದು ಸರ್ಕಾರ್ 2.0 ಯಾಕೆ ಬರಲಿಲ್ಲ..!? ಬಹುಶಃ ಕೇಜ್ರಿವಾಲ್ ರೀತಿ `ಮೌನ’ ಭಾಗ್ಯವನ್ನು ಸಿದ್ದರಾಮಯ್ಯ ಅಳವಡಿಸಿಕೊಂಡಿದ್ರೆ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಿದ್ರೇನೋ..!! ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು…, ಏನಂತೀರಿ ಸಿದ್ರಾಮಣ್ಣ..!!

Share This Article
Leave a Comment

Leave a Reply

Your email address will not be published. Required fields are marked *