ನವದೆಹಲಿ: ಕಳೆದ ಒಂದು ತಿಂಗಳಿಂದ ರಾಜ್ಯ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಬೈ ಎಲೆಕ್ಷನ್ ಬಳಿಕ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸ್ಥಾನಕ್ಕೆ ಇನ್ನು ಮರು ನೇಮಕವಾಗಿಲ್ಲ. ಇತ್ತ ಬಿಜೆಪಿಯಲ್ಲಿ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಾಕಷ್ಟು ವಿಳಂಬವಾದರೂ ಹೈಕಮಾಂಡ್ ಮಾತ್ರ ತಲೆಕೆಡಿಸಿಕೊಂಡಿಲ್ಲ.
ಈ ಎರಡು ಕಾರ್ಯಗಳ ವಿಳಂಬಕ್ಕೆ ಕಾರಣ ದೆಹಲಿ ವಿಧಾನಸಭೆ ಚುನಾವಣೆ ಎಂದು ಮೂಲಗಳು ಹೇಳುತ್ತಿವೆ. ಫೆಬ್ರವರಿ 8 ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಭರ್ಜರಿ ಪ್ರಚಾರ ಕಾರ್ಯಗಳು ಆರಂಭವಾಗಿದೆ. ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಆಪ್ ಮನ್ನಡೆಯಲ್ಲಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ವು ಶ್ರಮವನ್ನು ಚುನಾವಣೆ ಮೇಲೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
2015ರ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಖಾತೆ ತೆರೆಯಲಾಗದೆ ಸೊನ್ನೆ ಸುತ್ತಿಕೊಂಡಿತ್ತು. ಈ ಬಾರಿ ಬಿಜೆಪಿ ಕನಿಷ್ಠ ಎರಡಂಕಿ ಪಡೆಯುವ ಲೆಕ್ಕಚಾರದಲ್ಲಿದೆ. ಕಾಂಗ್ರೆಸ್ ಕನಿಷ್ಠ ಖಾತೆ ತೆರೆಯುವ ಜಿದ್ದಿನಲ್ಲಿದೆ.
ಹೀಗಾಗಿ ಈ ಚುನಾವಣೆ ಎರಡು ಪಕ್ಷಗಳಿಗೂ ಬಹುಮುಖ್ಯವಾಗಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಿಕೆ. ಅಲ್ಲದೇ ದೆಹಲಿ ಚುನಾವಣೆ ಹೊರತು ಇನ್ಯಾವುದೇ ವಿಚಾರಗಳ ಬಗ್ಗೆ ಹೈಕಮಾಂಡ್ ಚರ್ಚೆ ಮಾಡುತ್ತಿಲ್ಲ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹೈಕಮಾಂಡ್ ಭೇಟಿಗೆ ಅವಕಾಶ ನೀಡಿಲ್ಲ. ರಾಜ್ಯ ನಾಯಕರ ಜೊತೆಗೆ ಚರ್ಚೆಯಾದರೂ ಗೊಂದಲಗಳಿರುವ ಹಿನ್ನೆಲೆ ಕೆಪಿಸಿಸಿ ನೇಮಕಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಂಡಿಲ್ಲ.