ನವದೆಹಲಿ: ದೇಶದ ಚುನಾವಣಾ ರಾಜಕಾರಣದಲ್ಲಿ ಮಹತ್ವದ ಹೆಸರು ಪ್ರಶಾಂತ್ ಕಿಶೋರ್. 2014ರ ಲೋಕಸಭೆ ಚುನಾವಣೆಯಲ್ಲಿ ಪರಿಚಯವಾದ ಈ ಹೆಸರು ಚುನಾವಣಾ ತಂತ್ರಗಾರಿಕೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು. ಈ ಚುನಾವಣಾ ಚಾಣಕ್ಯನಿಗೆ ದೆಹಲಿಯ ಚುನಾವಣೆ ಅತಿ ಮುಖ್ಯವಾಗಿದೆ.
ದೆಹಲಿಯಲ್ಲಿ ಪ್ರಚಾರ ಅಂತ್ಯವಾಗಿದ್ದು, ಫೆಬ್ರವರಿ 8ಕ್ಕೆ ಮತದಾನ ನಡೆಯಲಿದೆ. ಫೆ.11ಕ್ಕೆ ಫಲಿತಾಂಶ ಹೊರ ಬರಲಿದ್ದು ಈ ಆಮ್ ಅದ್ಮಿ ಬಿಜೆಪಿ ನೇರ ಪೈಪೋಟಿ ನಡೆಸಿದೆ. ದಿಲ್ಲಿ ಗದ್ದುಗೆ ಕೇವಲ ಬಿಜೆಪಿ, ಆಪ್‍ಗೆ ಮಾತ್ರವಲ್ಲದೆ ಈ ಫಲಿತಾಂಶ ಚುನಾವಣೆಗಳ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಗೆ ಕೂಡ ನಿರ್ಣಾಯಕವಾಗಿದೆ.
2014ರಲ್ಲಿ ರಾಜಕೀಯ ಉತ್ತುಂಗದಲ್ಲಿದ್ದ ಪ್ರಶಾಂತ್ ಕಿಶೋರ್ ಹೆಸರು ಸದ್ಯ ತೆರೆಮರೆಗೆ ಸರಿಯುತ್ತಿದೆ. ಮೋದಿ ಮೊದಲ ಸರ್ಕಾರದ ರಚನೆ ಅವಧಿಯಲ್ಲಿ ಗುಜರಾತ್ ಮಾಡೆಲ್, ಚಾಯ್ ಪೇ ಚರ್ಚಾ, ಹರ್ ಹರ್ ಮೋದಿ ಘರ್ ಘರ್ ಮೋದಿ, ಚಾಯ್ ವಾಲಾ ಹೀಗೆ ನಾನಾ ಕಸರತ್ತುಗಳ ಮೂಲಕ ಮೋದಿ ಜನಪ್ರಿಯತೆ ಹೆಚ್ಚಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದ್ದ ಈ ಚಾಣಕ್ಯ, ಸದ್ಯ ಬಿಜೆಪಿಯನ್ನು ತೊರೆದಿದ್ದಾರೆ.
2015ರಲ್ಲಿ ಜೆಡಿಯು ಸೇರ್ಪಡೆಗೊಂಡಿದ್ದ ಅವರು ಬಿಹಾರದಲ್ಲಿ ನಿತೀಶ್ ಕುಮಾರ್ ಸಿಎಂ ಆಗಲು ತಂತ್ರಗಳನ್ನು ರೂಪಿಸಿದ್ದರು. ಬಳಿಕ ಪ್ರಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಅಮರಿಂದರ್ ಸಿಂಗ್‍ಗೆ ನೆರವು ನೀಡಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಾಧ್ಯವಾಗದಿದ್ದರೂ ಉತ್ತಮ ಪೈಪೋಟಿ ನೀಡುವತ್ತಾ ಪ್ರಯತ್ನ ಮಾಡಿದ್ದರು. ಇತ್ತಿಚೆಗೆ ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲೂ ಜಗನ್ ಮೋಹನ್ ರೆಡ್ಡಿಗೆ ರಾಜಕೀಯ ಸಲಹೆಗಳನ್ನು ಕಿಶೋರ್ ನೀಡಿದ್ದರು. ಇದನ್ನೂ ಓದಿ: ‘ಗೆಲ್ಲುವ ಕುದುರೆ’ಯ ಅಗತ್ಯ ನಮಗಿಲ್ಲ, ಚುನಾವಣೆಯ ತಂತ್ರಗಾರಿಕೆ ನಮಗೂ ಗೊತ್ತು
ಸದ್ಯ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಡಿಎಂಕೆ ಹಾಗೂ ದೆಹಲಿಯಲ್ಲಿ ಆಮ್ ಅದ್ಮಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಒಂದು ಸಮಯದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಕಿಶೋರ್, ಸದ್ಯ ಬಿಜೆಪಿ ವಿರುದ್ಧದ ಪಕ್ಷಗಳ ಜೊತೆಗೆ ಸಕ್ರಿಯಗೊಂಡಿದ್ದಾರೆ. ಹೀಗಾಗಿ ದೆಹಲಿಯ ಫಲಿತಾಂಶ ಹೆಚ್ಚು ಪ್ರಶಾಂತ್ ಕಿಶೋರ್ ಗೆ ಮುಖ್ಯವಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್‍ಗೆ ಚುನಾವಣಾ ಸಲಹೆಗಳನ್ನು ಪ್ರಶಾಂತ್ ಕಿಶೋರ್ ನೀಡುತ್ತಿದ್ದಾರೆ. ಚುನಾವಣೆ ತಿಂಗಳು ಮೊದಲೇ ಸಿದ್ಧತೆ ಮಾಡಿಕೊಂಡು ಪ್ರತಿ ಮನೆಗೂ ಕೇಜ್ರಿವಾಲ್ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಮೋದಿ, ಅಮಿತ್ ಶಾ ಜನಪ್ರಿಯತೆ ಬಿಜೆಪಿ ಚುನಾವಣಾ ಗೆಲುವಿಗೆ ಕಾರಣ ಎಂದವರಿಗೆ ಬಿಜೆಪಿ ವಿರೋಧಿ ಪಕ್ಷಗಳನ್ನು ಗೆಲ್ಲಿಸುವ ಮೂಲಕ ಸವಾಲು ಹಾಕಲು ಪ್ರಶಾಂತ್ ಕಿಶೋರ್ ಗೆ ದೆಹಲಿ ಫಲಿತಾಂಶ ನಿರ್ಣಾಯಕ ಎನಿಸಿದೆ.