ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ (Delhi Election Results) ಇಂದು ಪ್ರಕಟವಾಗಲಿದೆ. ರಾಷ್ಟ್ರ ರಾಜಧಾನಿಯ ಚುನಾವಣಾ ಕಣದಲ್ಲಿ ಈ ಬಾರಿ ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡಿವೆ. ನೀರು ಕರೆಂಟ್ ಫ್ರೀ ಕೊಟ್ಟಿದ್ದ ಆಪ್ (AAP) ಇನ್ನೊಂದು ಹೆಜ್ಜೆ ಮುಂದೆ ಹೋದರೆ, ಕಾಂಗ್ರೆಸ್ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನೇ ಚೂರು ಬದಲಿಸಿ ಪ್ರಕಟಿಸಿದೆ. ಇನ್ನೂ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಬಂದಿದ್ದ ಬಿಜೆಪಿ (BJP) ಕೂಡ ಈ ಬಾರಿ ಗ್ಯಾರಂಟಿ ಅಸ್ತ್ರದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದೆ. ಒಟ್ಟಿನಲ್ಲಿ ಈ ಬಾರಿ ದೆಹಲಿ ಚುನಾವಣಾ ಕಣ ಗ್ಯಾರಂಟಿಗಳಿಂದಲೇ ಸದ್ದು ಮಾಡುತ್ತಿದೆ ಅನ್ನೋದಂತೂ ಸುಳ್ಳಲ್ಲ.
ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದನ್ನೆ ಚುನಾವಣಾ ಬಂಡವಾಳ ಮಾಡಿಕೊಂಡಿದೆ. ಮಧ್ಯಪ್ರದೇಶ, ಮಹರಾಷ್ಟ್ರದಲ್ಲಿ ಗ್ಯಾರಂಟಿ ರೀತಿಯ ಯೋಜನೆಗಳಿಂದ ಗೆಲುವಿನ ರುಚಿ ನೋಡಿದ್ದ ಬಿಜೆಪಿ ಅದನ್ನು ವಿರೋಧಿಸುತ್ತಲೇ ದೆಹಲಿಯಲ್ಲಿ ಹತ್ತಾರು ಭರವಸೆ ನೀಡಿದೆ. ಇನ್ನೂ ಗ್ಯಾರಂಟಿ ಜನಕ ಅಂತಲೇ ಕರೆಸಿಕೊಳ್ಳುವ ಆಪ್ ನೀರು ವಿದ್ಯುತ್ ಜೊತೆಗೆ ಈಗ ಹಲವು ಹೆಚ್ಚುವರಿ ಭರವಸೆ ಘೋಷಿಸಿದೆ.
ಈಗ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪರಸ್ಪರ ಜಿದ್ದಿಗೆ ಬಿದ್ದಿದ್ದು ಜನರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಿದೆ. ಆ ಪೈಕಿ ಯಾರ್ಯಾರ ಭರವಸೆ ಏನು..? ಕಾಂಗ್ರೆಸ್ (Congress), ಬಿಜೆಪಿ, ಆಪ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಅಂತಾ ಏನು ಅನ್ನೋದನ್ನ ತಿಳಿಯಬೇಕಿದ್ದರೆ ಮುಂದೆ ಓದಿ…
ಆಪ್ ಗ್ಯಾರಂಟಿಗಳು ಯಾವುವು?
* ಮಹಿಳಾ ಸಮ್ಮಾನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2100
* ಹಿರಿಯರಿಗೆ ಉಚಿತ ಚಿಕಿತ್ಸೆಯ ‘ಸಂಜೀವಿನಿ’ ಯೋಜನೆ ಜಾರಿ
* ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್
* ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ
* ಮೆಟ್ರೋ ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ
* ಅರ್ಚಕರು ಮತ್ತು ಗುರುದ್ವಾರದ ಗ್ರಂಥಿಗಳ ಮಾಸಿಕ 18,000 ರೂ.
* ಪ್ರತಿ ಮನೆಗೂ 24*7 ಶುದ್ಧ ಮತ್ತು ಸ್ವಚ್ಛ ನೀರಿನ ಪೂರೈಕೆ
* ವಿಶ್ವದರ್ಜೆಯ ರೋಡ್‌ಗಳ ನಿರ್ಮಾಣ
* ಯಮುನಾ ನದಿ ಸ್ವಚ್ಛತೆ ಮುಂದುವರಿಕೆ
ಬಿಜೆಪಿ ಗ್ಯಾರಂಟಿಗಳೇನು?
* ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ 2,500 ರೂ.
* ಬಡ ಮಹಿಳೆಯರಿಗೆ 500 ರೂ.ಗೆ ಎಲ್‌ಪಿಜಿ, ವರ್ಷಕ್ಕೆರೆಡು ಉಚಿತ ಸಿಲಿಂಡರ್
* ಮಹಿಳೆಯರಿಗೆ 6 ಪೌಷ್ಠಿಕಾಂಶ ಕಿಟ್‌ಗಳು, ಗರ್ಭಿಣಿಯರಿಗೆ 21,000
* ಮೊದಲ ಸಂಪುಟದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ
* 60-70 ವರ್ಷದ ಹಿರಿಯ ನಾಗರಿಕರಿಗೆ 2,000-2,500 ರೂ. ಪಿಂಚಣಿ
* 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂ. ಪಿಂಚಣಿ ಯೋಜನೆ
* ದೆಹಲಿ ನಾಗರಿಕರಿಗೆರ 25 ಲಕ್ಷದ ಆರೋಗ್ಯ ವಿಮೆ
ಕಾಂಗ್ರೆಸ್ ಭರವಸೆಗಳೇನು?
* ಪ್ಯಾರಿದೀದಿ ಯೋಜನೆ – ಮಹಿಳೆಯರಿಗೆ ಮಾಸಿಕ 2,500 ರೂ.
* ನಿರುದ್ಯೋಗ ಯುವಕರಿಗೆ ತಿಂಗಳಿಗೆ 8,500 ರೂ. ಭತ್ಯೆ
* ಅರ್ಹ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್
* 500 ರೂ.ಗೆ ಒಂದು ಎಲ್‌ಪಿಜಿ ಸಿಲಿಂಡರ್
* ಉಚಿತ ಪಡಿತರ ಕಿಟ್‌ನೊಂದಿಗೆ 1 ವರ್ಷದ ತರಬೇತಿ ಕಾರ್ಯಕ್ರಮ
* 15 ಸಾವಿರ ನಾಗರಿಕ ರಕ್ಷಣಾ ಸ್ವಯಂ ಸೇವಕರನ್ನು ಪುನಸ್ಥಾಪನೆ
* ಮಹಿಳೆಯರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ.33ರಷ್ಟು ಮೀಸಲು
* ಹಿರಿಯ ನಾಗರಿಕರು, ವಿಧವೆಯರು, ದಿವ್ಯಾಂಗರಿಗೆ 5,000 ಪಿಂಚಣಿ
ಹೀಗೆ ಆಡಳಿತರೂಢ ಆಪ್ ಅನ್ನು ಕಟ್ಟಿಹಾಕಲು ಬಿಜೆಪಿ ಕಾಂಗ್ರೆಸ್ ಭಾರೀ ಕೊಡುಗೆಗಳನ್ನೇ ನೀಡಿದೆ. ಈ ಮೂರು ಪಕ್ಷಗಳ ಭರವಸೆಗಳಲ್ಲಿ ಯಾರ ಭರವಸೆಯನ್ನು ಜನರು ನಂಬಿದ್ದಾರೆ ಅನ್ನೋದು ಇಂದಿನ ಫಲಿತಾಂಶದಲ್ಲಿ ತಿಳಿಯಲಿದೆ.