ನವದೆಹಲಿ: ದೆಹಲಿಯಲ್ಲಿ ಫೆ.5 ರಂದು ಚುನಾವಣೆ (Delhi Election) ನಡೆಯಲಿದ್ದರೆ ಫೆ.8 ರಂದು ಮತ ಎಣಿಕೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv kumar) ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದರು.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಬೇಕಿದೆ.
ಎಎಪಿ (AAP) ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅರವಿಂದ್ ಕೇಜ್ರಿವಾಲ್ ಚುನಾವಣೆ ಗೆದ್ದು ಮತ್ತೆ ಸಿಎಂ ಹುದ್ದೆಗೇರುವ ತವಕದಲ್ಲಿದ್ದಾರೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿ (BJP) 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್ ಗೆಹ್ಲೋಟ್ ಬಿಜವಸನ್ನಿಂದ ಸ್ಪರ್ಧಿಸುತ್ತಿದ್ದಾರೆ. ಪಟೇಲ್ ನಗರದಿಂದ ರಾಜ್ ಕುಮಾರ್, ದೆಹಲಿಯ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದ್ ಸಿಂಗ್ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ 48 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮತ್ತೊಂದು ಪಟ್ಟಿ ಹೊರಬೇಕಿದೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಮಗ ಸಂದೀಪ್ ದೀಕ್ಷಿತ್ ಈ ಬಾರಿ ವಿಧಾನಸಭಾ ಚುನಾವಣೆಗೆ ಇಳಿಯಲಿದ್ದಾರೆ. ಈ ಹಿಂದೆ ಎರಡು ಬಾರಿ ಸಂಸದರಾಗಿದ್ದ ದೀಕ್ಷಿತ್ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2013 ಮತ್ತ 2015ರಲ್ಲಿ ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ವಿರುದ್ದ ಜಯ ಸಾಧಿಸಿದ್ದರು.
ಬಿಜೆಪಿ ಬೃಹತ್ ಪ್ರಚಾರವನ್ನು ನಡೆಸುತ್ತಿದ್ದು ಪ್ರಧಾನಿ ಮೋದಿ (PM Narendra Modi) ಪ್ರಚಾರದ ಮೂಲಕ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತಾರೂಢ ಎಎಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ನಗರಗಳಲ್ಲಿ ನೆಲೆಯೂರಲು ಸಿದ್ಧತೆಯನ್ನು ನಡೆಸಿದೆ.
ಬಿಜೆಪಿಯು 1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿದ್ದು, 2015 ರಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಹೊಂದಿರುವ ಎಎಪಿಯನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಎಎಪಿ 2015 ಮತ್ತು 2020ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿತ್ತು.