ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತೇಂದ್ರ ಜೈನ್ ಅವರ ಕಸ್ಟಡಿಯನ್ನು ಜೂನ್ 13ರವರೆಗೂ ವಿಸ್ತರಿಸಿ ಇಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಒಂಭತ್ತು ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಂದು ರೋಸ್ ಅವೆನ್ಯೂ ಸಂಕೀರ್ಣದಲ್ಲಿರುವ ಇಡಿ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಇಡಿ ಅಧಿಕಾರಿಗಳು ಹಾಜರುಪಡಿಸಿದ್ದರು ಮತ್ತು ಮತ್ತಷ್ಟು ವಿಚಾರಣೆಗಾಗಿ ಅವರ ಕಸ್ಟಡಿ ಮುಂದುವರಿಸಲು ಮನವಿ ಮಾಡಿದರು. ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ- ದೈನಂದಿನ ಪ್ರಕರಣಗಳಲ್ಲಿ 39% ಜಿಗಿತ
ಇಡಿ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ ರಾಜು, ಸತೇಂದ್ರ ಜೈನ್ ಬಂಧನ ಬಳಿಕ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ದಾಳಿ ವೇಳೆ 2.82 ಕೋಟಿ ರೂ. ನಗದು ಮತ್ತು 1.8 ಕೆ.ಜಿ ತೂಕದ 133 ಬಂಗಾರದ ನಾಣ್ಯಗಳು ಹಾಗೂ ಬಂಗಾರದ ಬಿಸ್ಕತ್‌ಗಳು ದೊರೆತಿವೆ. ಇದನ್ನೂ ಓದಿ: ಖ್ಯಾತ ಚಿತ್ರಸಾಹಿತಿ, ಪುಟ್ಟಣ್ಣ ಕಣಗಾಲ್ ಅಣ್ಣನ ಮಗ ಪುರುಷೋತ್ತಮ ಕಣಗಾಲ್ ನಿಧನ
ಮೊದಲ ದಾಳಿಯ ವೇಳೆಯೂ ಅಪಾರ ಪ್ರಮಾಣದ ಸಂಪತ್ತು ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮಾಡಲು ಅವಕಾಶ ನೀಡಬೇಕು. ಪತ್ತೆಯಾಗಿರುವ ಆಸ್ತಿಯ ಬಗ್ಗೆ ಸತೇಂದ್ರ ಜೈನ್ ರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ಇದಕ್ಕೆ ಸತೇಂದ್ರ ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಇತ್ತೀಚೆಗೆ ಲಾಲ್ ಶೇರ್ ಸಿಂಗ್ ಮೆಮೋರಿಯಲ್ ಟ್ರಸ್ಟ್ ಮೇಲೆ ಇಡಿ ದಾಳಿ ಮಾಡಿದೆ. ಅಲ್ಲಿ ಹಣ ಮತ್ತು ಚಿನ್ನ ದೊರೆತಿದೆ. ಆದರೆ ಟ್ರಸ್ಟ್‌ಗೂ ಜೈನ್‍ಗೂ ಯಾವುದೇ ಸಂಬಂಧ ಇಲ್ಲ. ಜೈನ್ ಅದರ ಮಾಜಿ ಅಧ್ಯಕ್ಷರಾಗಿದ್ದರು. ಹಾಲಿಯಲ್ಲಿ ಟ್ರಸ್ಟ್‍ನಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಹೀಗಾಗಿ ಇಡಿ ಆರೋಪ ಸರಿಯಾಗಿಲ್ಲ ಎಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇಡಿಗೆ ಮತ್ತಷ್ಟು ತನಿಖೆ ಮಾಡಲು ಅವಕಾಶ ನೀಡಿ ಜೂನ್ 13ರವರೆಗೂ ಕಸ್ಟಡಿ ವಿಸ್ತರಣೆ ಮಾಡಿತು. ಅಕ್ರಮ ಹಣ ವರ್ಗಾವಣೆ (PMLA) ಆರೋಪದ ಅಡಿಯಲ್ಲಿ ಮೇ 30 ರಂದು ಸತೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು.