ನವದೆಹಲಿ: ಜಾರಿ ನಿದೇರ್ಶನಾಲಯ(ಜಾರಿ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಅಕ್ಟೋಬರ್ 15ರವರೆಗೆ ವಿಸ್ತರಣೆಯಾಗಿದೆ.
ಡಿಕೆಶಿ ಅವರ ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗಿತ್ತು. ಹೀಗಾಗಿ ಇಂದು ಡಿಕೆಶಿಯನ್ನು ಇಡಿ ಕೋರ್ಟಿಗೆ ಕರೆತರಲಾಗಿತ್ತು. ಇಡಿ ಕೋರ್ಟಿನಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ. ಅಕ್ಟೋಬರ್ 14ಕ್ಕೆ ದೆಹಲಿಯ ಹೈಕೊರ್ಟಿನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಇಂದು ವಾದ ಮಂಡನೆ ಮಾಡಿದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್, ವಿಚಾರಣೆ ಇನ್ನೂ ಬಾಕಿ ಇದೆ. ಡಿಕೆಶಿ ಆಸ್ಪತ್ರೆಯಲ್ಲಿ ಇದ್ದುದ್ದರಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ನಮ್ಮ ಕಸ್ಟಡಿಗೆ ನೀಡಿ ಎಂದು ಕೇಳಿಕೊಂಡರು.
ಇಡಿ ಅಧಿಕಾರಿಗಳ ಈ ವಾದಕ್ಕೆ ಡಿಕೆಶಿ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ವಿಚಾರಣೆಗೆ ಡಿಕೆಶಿ ಸಹಕರಿಸಿದ್ದಾರೆ. ಅಲ್ಲದೆ ಇನ್ನು ಮುಂದೆಯೂ ಅವರು ಯಾವುದೇ ವಿಚಾರಣೆಗೆ ಸಿದ್ಧರಿದ್ದಾರೆ. ನ್ಯಾಯಾಂಗ ಬಂಧನ ವೇಳೆ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಡಿ. ಅಲ್ಲದೆ ಜೈಲಿನಲ್ಲಿ ಓದಲು ಪುಸ್ತಕವನ್ನು ಕೊಡಿ ಎಂದು ಡಿಕೆಶಿ ಪರ ವಕೀಲರು ಮತ್ತೊಂದು ಮನವಿಯನ್ನು ನ್ಯಾಯಮೂರ್ತಿಗಳು ಮುಂದಿಟ್ಟರು.
ದಿನಕ್ಕೆ 3-5 ಗಂಟೆ ವಿಚಾರಣೆ ಮಾಡಲಿ. ನನ್ನ ಕಕ್ಷೀದಾರರಿಗೆ ಓದಲು ಪುಸ್ತಕ, ಸ್ಟೇಷನರಿ ಬೇಕು ಎಂದು ಡಿಕೆಶಿ ಪರ ವಕೀಲರು ಮನವಿ ಮಾಡಿಕೊಂಡರು.
ಈ ಮಧ್ಯೆ ಜಡ್ಜ್ ತನಿಖಾಧಿಕಾರಿ ಯಾರು ಎಂದು ಪ್ರಶ್ನಿಸುತ್ತಿದ್ದಂತೆಯೇ ತನಿಖಾಧಿಕಾರಿ ಸೌರಭ್ ಮೆಹ್ತಾ ಪೀಠದ ಮುಂದೆ ಬಂದು ನಿಂತರು. ಆಗ ನೀವು ಯಾರು ಯಾರನ್ನು ತನಿಖೆ ಮಾಡಿದ್ದೀರಿ ಎಂದು ನ್ಯಾಯಮೂರ್ತಿಗಳು ಕೇಳಿದರು.
ಇಂದು ಡಿಕೆಶಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹೋದರ ಡಿಕೆ ಸುರೇಶ್ ಹಾಗೂ ಡಿಕೆಶಿ ಬೆಂಬಲಿಗರು ಕೂಡ ಕೋರ್ಟ್ ಹೊರಗಡೆ ಜಮಾಯಿಸಿದ್ದರು.