ನವದೆಹಲಿ: ಹೆಲ್ಮೆಟ್ ಧರಿಸದಿದ್ದರೆ ಅಡ್ಡ ಹಾಕಿ ದಂಡ ವಿಧಿಸುವ ಪೊಲೀಸರನ್ನು ನೋಡಿದ್ದೇವೆ. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದಿದ್ದವರಿಗೆ ಉಚಿತವಾಗಿ ಹೆಲ್ಮೆಟ್ ನನ್ನು ಉಡುಗೊರೆ ಕೊಡುತ್ತಿದ್ದಾರೆ.
ದೆಹಲಿಯ ರೋಹಿಣಿ ಪ್ರದೇಶದ ಪೊಲೀಸ್ ಪೇದೆ ಸಂದೀಪ್ ಈ ಕೆಲಸ ಮಾಡುತ್ತಿದ್ದಾರೆ. ಸಂದೀಪ್ ಅವರು ಟ್ರಾಫಿಕ್ ನಿಯಮ ಪ್ರಕಾರ, ನಿಯಮ ಉಲ್ಲಂಘಿಸುವ ಬೈಕ್ ಸವಾರರನ್ನು ತಡೆಡು ಮೊದಲು ದಂಡ ಹಾಕುತ್ತಾರೆ. ನಂತರ ಹೆಲ್ಮೆಟ್ ಹಾಕಬೇಕಾದ ಅಗತ್ಯತೆಯ ಬಗ್ಗೆ ತಿಳಿಸಿ ಹೇಳುತ್ತಾರೆ. ಬಳಿಕ ಒಂದು ಹೆಲ್ಮೆಟ್ ನನ್ನು ಉಚಿತವಾಗಿ ನೀಡುತ್ತಾರೆ.
ಸಂದೀಪ್ ಅವಸರ ಮಾಡದೇ ಸವಾರರನ್ನು ತಡೆದು ಮಾತನಾಡಿಸುತ್ತಾರೆ. ಏಕೆ ಹೆಲ್ಮೆಟ್ ಧರಿಸುವುದಿಲ್ಲ ಎಂದು ಕೇಳುತ್ತಾರೆ. ಬಳಿಕ ಧರಿಸದೆ ಇರುವುದರಿಂದ ಆಗುವ ಅಪಾಯಗಳು ಮತ್ತು ಧರಿಸುವುದರಿಂದ ಸಿಗುವ ಸುರಕ್ಷತೆಯನ್ನು ವಿವರಿಸುತ್ತಾರೆ. ಕೊನೆಗೆ ಸವಾರರು ಪ್ರಾಮಾಣಿಕವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡರೆ ತಾವೇ ಉಚಿತ ಹೆಲ್ಮೆಟ್ ಕೊಟ್ಟು ಶುಭ ಹಾರೈಸಿ ಕಳುಹಿಸಿಕೊಡುತ್ತಾರೆ.
ಇದು ಪೊಲೀಸ್ ಇಲಾಖೆಯ ಕಾರ್ಯಕ್ರಮವಲ್ಲ. ಇದು ನನ್ನ ಯೋಚನೆಯಾಗಿದ್ದು, ನನ್ನ ಹಣವನ್ನೆ ಬಳಸುತ್ತಿದ್ದೇನೆ. ದೆಹಲಿ ಪೊಲೀಸ್ ಇಲಾಖೆ ಸೇರಿದ ಮೇಲೆ ನಾನು ತುಂಬಾ ಅಪಘಾತಗಳನ್ನು ಗಮನಿಸಿದ್ದೇನೆ. ಶೇಕಡ 90 ರಷ್ಟು ಪ್ರಕರಣಗಳು ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳದಿರುವುದಿಂದ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಹೆಲ್ಮೆಟ್ ಕೊಡಲು ಆರಂಭಿಸಿದ್ದೇನೆ ಎಂದು ಸಂದೀಪ್ ತಿಳಿಸಿದರು.
ಪ್ರತಿನಿತ್ಯ ಕೆಲಸದ ವೇಳೆ ಹೆಲ್ಮೆಟ್ ವಿತರಿಸುವುದರ ಜೊತೆಗೆ ಸಂದೀಪ್ ಅವರು ಹಬ್ಬದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ರಕ್ಷಾ ಬಂಧನ ಮತ್ತು ಭೈಯಾ ದೂಜ್ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಜೊತೆ ಸಮಾಲೋಚನೆ ನಡೆಸುತ್ತಾರೆ. ಸುರಕ್ಷಾ ನಿಯಮದ ಬಗ್ಗೆ ಅವರಿಗೆ ತಿಳಿಸುತ್ತಾರೆ. ಇವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದ ಮತ್ತು ಅವರ ಸಹೊದ್ಯೋಗಿಗಳ ಬೆಂಬಲ ಇದೆ.
ಸಂದೀಪ್ ಮುಂದಿನ ದಿನಗಳಲ್ಲಿ ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸುವುದು ಮತ್ತು ಸೀಟ್ ಬೆಲ್ಟ್‍ಗಳನ್ನು ಧರಿಸದಿರುವುದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಯೋಚನೆಯನ್ನು. ಇವರ ಈ ಸಮಾಜಮುಖಿ ಕೆಲಸಕ್ಕೆ ದೆಹಲಿ ಪೊಲೀಸ್ ಇಲಾಖೆಯು ಅಭಿನಂದಿಸಿ ಪ್ರೋತ್ಸಾಹಿಸಿದೆ.