ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

Public TV
2 Min Read
Sunita Kejriwal

– ದೆಹಲಿಯನ್ನ ನಾಶ ಮಾಡಲು ಬಯಸಿದ್ದಾರೆ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಪತ್ನಿ ಕೆಂಡ

ನವದೆಹಲಿ: ಹೊಸ ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? ಎಂದು ಮಾರ್ಚ್ 28ರಂದು ಕೋರ್ಟ್‌‌ಗೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಬಹಿರಂಗ ಪಡಿಸಲಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಮೇತ ದೇಶದ ಜನರ ಮುಂದೆ ತಿಳಿಸುತ್ತೇನೆ ಎಂದು ನನಗೆ ಹೇಳಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅವರನ್ನು ಭೇಟಿಯಾದ ವೇಳೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ನಮ್ಮ‌ ನಿವಾಸದ ಮೇಲೆ ದಾಳಿ ನಡೆಸಿದಾಗ ಇಡಿ ಅಧಿಕಾರಿಗಳಿಗೆ ಕೇವಲ 75,000 ರೂ. ಲಭಿಸಿದೆ. ಇಡಿ (ED Raid) ಈವರೆಗೆ 250ಕ್ಕೂ ಹೆಚ್ಚು ದಾಳಿಗಳನ್ನ ನಡೆಸಿದೆ ಹಣಕ್ಕಾಗಿ ಹುಡುಕುತ್ತಿದ್ದಾರೆ ಅವರಿಗೆ ಈವರೆಗೂ ಏನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲಸಚಿವ ಅತಿಶಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸಿದೆ. ಒಟ್ಟಿನಲ್ಲಿ ಅವರು ದೆಹಲಿಯನ್ನ ನಾಶಮಾಡಲು ಬಯಸುತ್ತಾರೆ? ಜನರು ನರಳುತ್ತಲೇ ಇರಬೇಕೆಂದು ಅವರು ಬಯಸುತ್ತಾರೆಯೇ? ಅರವಿಂದ್ ಕೇಜ್ರಿವಾಲ್‌ಗೆ ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ.

ನನ್ನ ಪತಿ ನಿಜವಾದ ದೇಶಭಕ್ತ, ನಿರ್ಭೀತ ಮತ್ತು ಧೈರ್ಯಶಾಲಿ ವ್ಯಕ್ತಿ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಜನ ಬಯಸುತ್ತಾರೆ. ಅವರು ದೈಹಿಕವಾಗಿ ಜೈಲಿನಲ್ಲಿದ್ದರೂ, ಅವರ ಆತ್ಮವು ಜನರ ನಡುವೆ ಇದೆ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ. ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿರುವ ಇಡಿ ಮಾರ್ಚ್ 28 ವರೆಗೂ ಕಸ್ಟಡಿಗೆ ಪಡೆದುಕೊಂಡಿದೆ.

Share This Article