ನವದೆಹಲಿ: ಗೃಹ ಸಚಿವ ಅಮಿತ್ ಶಾ (Amitshah) ಇನ್ನೂ ಪ್ರಧಾನಿಯಾಗಿಲ್ಲ, ಆಗಲೇ ಅವರು ದುರಹಂಕಾರಿಯಾಗಿದ್ದಾರೆ. ದೇಶದ ಜನರನ್ನು ನಿಂದಿಸಲು ಆರಂಭಿಸಿದ್ದಾರೆ. ಆಪ್ ಬೆಂಬಲಿಗರನ್ನು ಪಾಕಿಸ್ತಾನಿಗಳು ಎನ್ನುತ್ತಿದ್ದಾರೆ. ಈ ಮೂಲಕ ಅವರು ಜನರನ್ನು ಅವಮಾನಿಸುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಅವರು ವೀಡಿಯೋ ಬಿಡುಗಡೆ ಮಾಡಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮವಾರ ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಜನರನ್ನು ನಿಂದಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಬೆಂಬಲಿಗರು ಪಾಕಿಸ್ತಾನಿಗಳು ಎಂದು ಕರೆದಿದ್ದಾರೆ. ನಾನು ಅವರನ್ನು ಕೇಳಲು ಬಯಸುತ್ತೇನೆ, ದೆಹಲಿಯ ಜನರು ನಮಗೆ 62 ಸ್ಥಾನಗಳನ್ನು ನೀಡುವ ಮೂಲಕ ನಮ್ಮ ಸರ್ಕಾರವನ್ನು ರಚಿಸಿದ್ದಾರೆ. ಪಂಜಾಬ್ ನಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ನಮಗೆ ನೀಡಿದ್ದಾರೆ. ಗುಜರಾತ್, ಗೋವಾ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶದ ಜನರು ನಮಗೆ ಪ್ರೀತಿ ಮತ್ತು ವಿಶ್ವಾಸವನ್ನು ನೀಡಿದ್ದಾರೆ. ನಮ್ಮನ್ನು ಬೆಂಬಲಿಸಿದ ಜನರು ಪಾಕಿಸ್ತಾನಿಗಳಾ ಎಂದು ಪ್ರಶ್ನಿಸಿದರು.
ಈ ದೇಶದ ಜನರೆಲ್ಲರೂ ನಿಮ್ಮನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆಯೇ? ನೀವು ಇನ್ನೂ ಪ್ರಧಾನಿಯಾಗಿಲ್ಲ. ಈಗಲೇ ನೀವು ತುಂಬಾ ದುರಹಂಕಾರಿಯಾಗಿದ್ದೀರಿ. ಜನರನ್ನು ನಿಂದಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದ್ದೀರಿ. ನೀವು ಪ್ರಧಾನಿಯಾಗುತ್ತಿಲ್ಲ, ಜನರು ಬಿಜೆಪಿ ಸರ್ಕಾರವನ್ನು ರಚಿಸುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ
ಲೋಕಸಭಾ ಚುನಾವಣೆಯ ಒಂದೊಂದೇ ಹಂತ ಮುಕ್ತಾಯವಾಗುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ (narendra Modi) ಅವರ ಸರ್ಕಾರ ದೇಶದಿಂದ ನಿರ್ಗಮಿಸುತ್ತಿದೆ. ಜೂನ್ 4 ರಂದು ಇಂಡಿಯಾ ಒಕ್ಕೂಟದ ಮೈತ್ರಿ ಸರ್ಕಾರ ರಚನೆಯಾಗಲಿದೆ. ಪ್ರತಿ ಹಂತದ ಮತದಾನದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇಂಡಿಯಾ ಬ್ಲಾಕ್ ದೇಶಕ್ಕೆ ಸ್ಥಿರ ಸರ್ಕಾರವನ್ನು ನೀಡುತ್ತದೆ. ಮೋದಿ ಸರ್ಕಾರವು ಅಧಿಕಾರದಿಂದ ಹೊರಬರಲಿದೆ ಎಂದು ಇದೇ ವೇಳೆ ಕೇಜ್ರಿವಾಲ್ ಭವಿಷ್ಯ ನುಡಿದರು.