ದೆಹಲಿಯಲ್ಲಿ ಮಾಲಿನ್ಯ ಹೆಚ್ಚಳ – ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದ ಕೇಜ್ರಿವಾಲ್

Public TV
1 Min Read
aravind kejrival 1

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಟ್ಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಗರದ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ವಿತರಿಸಿದ್ದಾರೆ.

ದೆಹಲಿಯ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಗಿರುವ ಹೊಗೆ ನಗರದಲ್ಲಿ ವಾಯು ಮಾಲಿನ್ಯ ಮಟ್ಟ ಏರಿಕೆಯಾಗಿ ಪರಿಸ್ಥಿತಿ ಹದಗೆಟ್ಟಿದೆ. ಅದರಲ್ಲೂ ಈ ವರ್ಷ ವಾಯು ಮಾಲಿನ್ಯ ಸಮಸ್ಯೆ ದ್ವಿಗುಣಗೊಂಡಿದ್ದು ದೆಹಲಿ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ ಮತ್ತು ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಮಟ್ಟ ಹೆಚ್ಚಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ.

aravind kejrival

ದೆಹಲಿಯಲ್ಲಿ ವಾಯು ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದ್ದು ಜನರು ಉಸಿರಾಡಲು ತೊಂದರೆ ಪಡುತ್ತಿದ್ದಾರೆ. ಮಾಲಿನ್ಯದಿಂದ ಮಕ್ಕಳು ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಆರೋಗ್ಯ ಮೇಲೆ ನಿಗಾ ವಹಿಸಲು ಖಾಸಗಿ ಮತ್ತು ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗೂ ಎರಡು ಮಾಸ್ಕ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದರು.

ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯ ಹೊಗೆಯಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ. ಈ ವಿಷಕಾರಿ ಗಾಳಿಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೂಲಕ ನಾವು ಇಂದು 50 ಲಕ್ಷ ಮಾಸ್ಕ್ ವಿತರಿಸಲು ಪ್ರಾರಂಭಿಸಿದ್ದೇವೆ. ಅಗತ್ಯವಿದ್ದಾಗಲೆಲ್ಲಾ ಅವುಗಳನ್ನು ಬಳಸಬೇಕೆಂದು ನಾನು ದೆಹಲಿಯ ಎಲ್ಲಾ ಜನರನ್ನು ಕೋರಿಕೊಳ್ಳುತ್ತಿದ್ದೇನೆ ಎಂದು ಬರೆದು, ಉಸಿರಾಡಲು ಸಮಸ್ಯೆ ಎದುರಿಸುತ್ತಿರುವ ದೆಹಲಿ ನಿವಾಸಿಗಳಿಗೆ 50 ಲಕ್ಷಕ್ಕೂ ಹೆಚ್ಚು ಎನ್ 95 ಮಾಸ್ಕ್ ವಿತರಿಸುವ ಬಗ್ಗೆ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ವಾಯು ಮಾಲಿನ್ಯದಿಂದಾಗಿ ದೆಹಲಿಯ ಶಾಲಾ-ಕಾಲೇಜುಗಳಲ್ಲಿ ಹೊರಾಂಗಣ ಕ್ರೀಡಾಕೂಟಗಳನ್ನು ನಡೆಸದಂತೆ ಸರ್ಕಾರ ಸೂಚಿಸಿದೆ. ಹಾಗೆಯೇ ಓ95 ಮಾಸ್ಕ್‌ಗಳನ್ನೇ ಪ್ರತಿದಿನ ದೆಹಲಿ ನಿವಾಸಿಗಳು ಬಳಸಿ. ಇದು ಮೂಗು ಮತ್ತು ಬಾಯಿಯನ್ನು ಮುಚ್ಚುವುದರ ಜೊತೆಗೆ 95% ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುತ್ತದೆ. ಆಗ ಉಸಿರಾಡಲು ಕೊಂಚ ಸುಲಭವಾಗುತ್ತದೆ. ಹೀಗಾಗಿ ಈ ಮಾಸ್ಕ್‌ಗಳನ್ನೇ ಜನರಿಗೆ ಬಳಸುವಂತೆ ಸರ್ಕಾರ ಶಿಫಾರಸು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *