ನವದೆಹಲಿ: ದೆಹಲಿ (Delhi) ಸಿಎಂ ಆಗಿ ಅಧಿಕಾರ ವಹಿಸಿಕೊಂಡು 50 ದಿನಗಳು ಕಳೆದರೂ ಇನ್ನೂ ರೇಖಾ ಗುಪ್ತಾ (Rekha Gupta) ಅವರಿಗೆ ಅಧಿಕೃತ ನಿವಾಸವನ್ನು ಲೋಕೋಪಯೋಗಿ ಇಲಾಖೆ ನೀಡಿಲ್ಲ. ಇದರಿಂದಾಗಿ ಅವರು ಶಾಲಿಮಾರ್ ಬಾಗ್‌ನಲ್ಲಿರುವ ತಮ್ಮ ನಿವಾಸದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ದೆಹಲಿ ಸಚಿವಾಲಯಕ್ಕೆ ಪ್ರತಿದಿನ ಪ್ರಯಾಣಿಸಬೇಕಾಗಿದೆ.
ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆಡಳಿತದ ಅವಧಿಯಲ್ಲಿ ನಿರ್ಮಿಸಲಾದ ಶೀಶ್ ಮಹಲ್‌ಗೆ (Sheesh Mahal) ತೆರಳದಿರಲು ಅವರು ನಿರ್ಧರಿಸಿದ್ದರಿಂದ ಅವರಿಗೆ ಅಧಿಕೃತ ಬಂಗಲೆಯ ಸಮಸ್ಯೆ ಎದುರಾಗಿದೆ. ಅವರ ಈ ನಿರ್ಧಾರ ಅಧಿಕಾರಿಗಳನ್ನು ಪರದಾಡುವಂತೆ ಮಾಡಿದ್ದು, ಇನ್ನೂ ಈ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ಇದನ್ನೂ ಓದಿ: ಇನ್ನು ಮುಂದೆ ಹೊಟೇಲ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ – ಫೇಸ್ ಐಡಿಯಲ್ಲೇ ದೃಢೀಕರಣ
ಶಾಲಿಮಾರ್ ಬಾಗ್‌ನ ಅವರ ಪ್ರಸ್ತುತ ನಿವಾಸದಲ್ಲಿ ಹಿರಿಯ ಅಧಿಕಾರಿಗಳು, ವಿಐಪಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಬರುವ ಸಂದರ್ಶಕರಿಂದ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಅದಕ್ಕಾಗಿ ಲಭ್ಯವಿರುವ ಸರ್ಕಾರಿ ಬಂಗಲೆಗಳ ಮೌಲ್ಯಮಾಪನಗಳಾಗಿದ್ದು, ಅವರ ವಸತಿ ಬಗ್ಗೆ ಅಂತಿಮ ನಿರ್ಧಾರ ಬಾಕಿ ಉಳಿದಿದೆ. ಅಲ್ಲದೇ ಕೇಂದ್ರ ಸರ್ಕಾರದ ನಿಧಿಯಿಂದ ಸರ್ಕಾರ ಒದಗಿಸಿರುವ ಬಂಗಲೆಯನ್ನು ಅವರು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಪ್ತಾ ಅವರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರವಿರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ನಿವಾಸಕ್ಕೆ ಆದ್ಯತೆ ಕೊಟ್ಟಿದ್ದಾರೆ. ಆದಾಗ್ಯೂ, ಆ ವಲಯದಲ್ಲಿ ನಿವಾಸವನ್ನು ಪಡೆಯಲು ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಹಾಗೂ ಕೇಂದ್ರ ಸಂಸ್ಥೆಗಳಿಂದ ಅನುಮತಿ ಮತ್ತು ಹಂಚಿಕೆ ಅಗತ್ಯವಿರುತ್ತದೆ. ಇದರಿಂದ ಬಂಗಲೆ ದೊರೆಯುವುದು ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ, ರೇಖಾ ಗುಪ್ತಾ ಅವರು ಶೀಶ್ ಮಹಲ್‌ನಲ್ಲಿ ವಾಸಿಸುವುದಿಲ್ಲ ಎಂದು ಘೋಷಿಸಿದ್ದರು. ಬದಲಿಗೆ ಅದನ್ನು ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಐಷಾರಾಮಿ ಬಂಗಲೆಯೂ 2015 ರಿಂದ ಅಕ್ಟೋಬರ್ 2024 ರವರೆಗೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಧಿಕೃತ ನಿವಾಸವಾಗಿತ್ತು. ಇದನ್ನೂ ಓದಿ: ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ